ಸಿದ್ದರಾಮಯ್ಯ ʼಹುಲಿಯಾʼ ಬದಲು ʼಇಲಿಯಾʼ ಆಗಿದ್ದಾರೆ : ಆರ್.ಅಶೋಕ್ ಟೀಕೆ

ಆರ್.ಅಶೋಕ್/ಸಿದ್ದರಾಮಯ್ಯ
ಬೆಂಗಳೂರು : ರಾಜ್ಯಪಾಲರ ಭಾಷಣದ ಮೂಲಕ ಕಾಂಗ್ರೆಸ್ ಸರಕಾರ ಕೇವಲ ಸುಳ್ಳುಗಳನ್ನೇ ಹೇಳಿಸಿದೆ. ಸಿಎಂ ಸಿದ್ದರಾಮಯ್ಯನವರು ಹುಲಿಯಾ ಬದಲು ಇಲಿಯಾ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಅವರು, ವಿಬಿ- ಜಿ ರಾಮ್ ಜಿ ಕಾಯ್ದೆಗೆ ರಾಷ್ಟ್ರಪತಿ ಸಹಿ ಹಾಕಿ ಜಾರಿಯಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದೇಕೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ರಾಮನ ಹೆಸರನ್ನು ಕಂಡರೆ ಕಾಂಗ್ರೆಸ್ಗೆ ಆಗಲ್ಲ. ಇದೇ ಕಾರಣಕ್ಕೆ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲಾಗಿದೆ. ರಾಮಲಿಂಗಾರೆಡ್ಡಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಈಗ ಅಲ್ಲಿ ಜಿಲ್ಲೆಯೇ ಇಲ್ಲ. ಮಹಾತ್ಮ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಎಂದು ಹೇಳಿದ್ದರು. ಕಾಂಗ್ರೆಸ್ ಸರಕಾರ ಕೇಂದ್ರದ ವಿರುದ್ಧ 18 ನಿರ್ಣಯಗಳನ್ನು ತೆಗೆದುಕೊಂಡಿದೆ. ಹೀಗೆ ಎಲ್ಲಕ್ಕೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ ಎಂದರು.
ಮಾಜಿ ಪ್ರಧಾನಿಗಳಾದ ಜವಹರಲಾಲ್ ನೆಹರು 17 ಬಾರಿ, ಇಂದಿರಾಗಾಂಧಿ 29 ಬಾರಿ, ರಾಜೀವ್ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್ ಪಕ್ಷ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ಮಾಜಿ ಅಟಲ್ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದರು.
ಎಷ್ಟು ಯೋಜನೆಗಳಿಗೆ ಹೆಸರಿದೆ?
ಕಾಂಗ್ರೆಸ್ ಎಷ್ಟು ಯೋಜನೆಗಳಿಗೆ ಮಹಾತ್ಮ ಗಾಂಧೀಜಿಯ ಹೆಸರಿಟ್ಟಿದೆ? ಆದರೆ ಇಂದಿರಾಗಾಂಧಿ ಕುಟುಂಬದವರ ಹೆಸರುಗಳನ್ನು ಹೆಚ್ಚಾಗಿ ಇರಿಸಲಾಗಿದೆ. ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆ, ರಾಜೀವ್ ಗಾಂಧಿ ಕುಡಿಯುವ ನೀರಿನ ಮಿಷನ್, ರಾಜೀವ್ ಗಾಂಧಿ ರಾಷ್ಟ್ರೀಯ ಶಿಶು ವಿಹಾರ, ಇಂದಿರಾ ಆವಾಸ್, ಜವಹರಲಾಲ್ ನೆಹರು ನಗರ ನವೀಕರಣ, ನೆಹರು ರೋಜ್ಗಾರ್, ಇಂದಿರಾಗಾಂಧಿ ಕಾಲುವೆ ಯೋಜನೆ, ರಾಜೀವ್ ಗಾಂಧಿ ಸಾಮಾಜಿಕ ಭದ್ರತೆ, ಇಂದಿರಾಗಾಂಧಿ ಪಥ ಯೋಜನೆ, ರಾಜೀವ್ ಗಾಂಧಿ ನಾಗರಹೊಳೆ ಅಭಯಾರಣ್ಯ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಜವಹರಲಾಲ್ ನೆಹರು ಆಸ್ಪತ್ರೆ, ಹೀಗೆ 454 ಯೋಜನೆ, ಸಂಸ್ಥೆಗಳಿಗೆ ಇವರ ಕುಟುಂಬದವರ ಹೆಸರನ್ನೇ ಇಡಲಾಗಿದೆ ಎಂದರು.
80 ಪರ್ಸೆಂಟ್ ಸರಕಾರ :
ಗುತ್ತಿಗೆದಾರರು ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಬಿಜೆಪಿ ಸರಕಾರವಿದ್ದರೂ 40 ಪರ್ಸೆಂಟ್ ಎಂದು ಆರೋಪ ಮಾಡಲಾಗಿತ್ತು. ಮಧ್ಯವರ್ತಿಗಳ ಹಾವಳಿ, ಹಿಂದಿನ ಸರಕಾರಕ್ಕಿಂತ ದುಪ್ಪಟ್ಟು ಕಮಿಶನ್, 80 ಪರ್ಸೆಂಟ್ ಕಮಿಶನ್ ಹೀಗೆ ಮೊದಲಾದ ಆರೋಪಗಳನ್ನು ಮಾಡಿದ್ದಾರೆ. ಅವರು ಮಾಡಿರುವ ಆರೋಪ ರಾಹುಲ್ ಗಾಂಧಿಯ ತನಕ ಹೋಗಿದೆ. ಆಂಧ್ರದವರಿಗೆ ಟೆಂಡರ್ ನೀಡಲಾಗಿದೆ, ಹಳೆ ಬಿಲ್ಗಳಿಗೆ ಹೆಚ್ಚಿನ ಕಮಿಶನ್ ಪಡೆಯಲಾಗುತ್ತಿದೆ, 37,370 ಕೋಟಿ ರೂ. ಬಾಕಿ ಇದೆ ಎಂದಿದ್ದರೂ ಸರಕಾರ ಕ್ರಮ ವಹಿಸಿಲ್ಲ, ಮುಷ್ಕರ ಮಾಡದೇ ಬೇರೆ ದಾರಿಯಿಲ್ಲ ಎಂದು ಗುತ್ತಿಗೆದಾರರ ಸಂಘ ತಿಳಿಸಿದೆ. ನಗರಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಘ ಪತ್ರ ಬರೆದಿದೆ ಎಂದರು.
ಅತಿ ಹೆಚ್ಚು ಸಾಲ :
ಸಿಎಂ ಸಿದ್ದರಾಮಯ್ಯ ಅತಿ ಹೆಚ್ಚು ಅಂದರೆ 7.64 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯನವರಿಂದ ಆರಂಭವಾಗಿ ಈವರೆಗಿನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣ ನೀಡುತ್ತೇವೆಂದು ಹೇಳಿ ಇನ್ನೂ ನೀಡಿಲ್ಲ. ಆರ್ಥಿಕ ಇಲಾಖೆ ಇನ್ನೂ ಹಣ ನೀಡಿಲ್ಲವೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಏನು ಮಾಡುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅನ್ನಭಾಗ್ಯದ 657 ಕೋಟಿ ರೂ. ಮೊತ್ತ ಜನರಿಗೆ ಸಿಕ್ಕಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನೀಡದೆ ಶಾಸಕರು ಪರದಾಡುತ್ತಿದ್ದಾರೆ, ಅಂಗನವಾಡಿ ಸಹಾಯಕರ ಗೌರವಧನ ನೀಡದೆ ಅವರು ಪರದಾಡುತ್ತಿದ್ದಾರೆ, ನೆರೆ ಪರಿಹಾರ ನೀಡದೆ ರೈತರು ಪರದಾಡುತ್ತಿದ್ದಾರೆ. ಆದರೆ ಸಚಿವರು ಹಣ ಮಾಡುವುದರಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಇದು ಇಲ್ಲಗಳ ಸರಕಾರ. ಸರಕಾರದ ಖಜಾನೆಯಲ್ಲಿ ಹೆಗ್ಗಣಗಳ ಕಾಟದಿಂದ ಯಾವ ಹಣವನ್ನೂ ನೀಡಲು ಆಗುತ್ತಿಲ್ಲ. ಸರಕಾರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಧಾರವಾಡದಲ್ಲಿ 10 ಸಾವಿರ ಅಭ್ಯರ್ಥಿಗಳು ಹೋರಾಟ ಮಾಡುತ್ತಿದ್ದಾರೆ ಎಂದರು.







