ಶಾಸಕರಿಗೆ 50 ಕೋಟಿ ರೂ.ಗಳ ವಿಶೇಷ ಅನುದಾನ ಹಂಚಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: 2025-26ನೆ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳ ವಿಶೇಷ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಶಾಸಕರಿಗೆ ಪತ್ರ ಬರೆದಿರುವ ಅವರು, ಲೋಕೋಪಯೋಗಿ ಇಲಾಖೆ, ರಸ್ತೆ ಮತ್ತು ಸೇತುವೆ ಕಾಮಗಾರಿಗಳು, ಗ್ರಾಮೀಣ ರಸ್ತೆ ಮತ್ತು ಸೇತುವೆ ಹಾಗೂ ನಗರ ಪ್ರದೇಶದ ಕಾಮಗಾರಿಗಳಿಗೆ 37.50 ಕೋಟಿ ರೂ., ವಿವೇಚನಾಧಿಕಾರದಡಿ ವಿಧಾನಸಭಾ ಸದಸ್ಯರು ಆಯ್ಕೆ ಮಾಡಬಹುದಾದ ಇತರೆ ಇಲಾಖೆಯ ಕಾಮಗಾರಿಗಳಿಗೆ 12.50 ಕೋಟಿ ರೂ.ಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.
ಜು.30 ಹಾಗೂ 31ರಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದ್ದು, ಶಾಸಕರು ತಮ್ಮ ಬೇಡಿಕೆ ಪತ್ರದೊಂದಿಗೆ, ಕಾಮಗಾರಿಗಳ ವಿವರಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಹಾಗೂ ಬಿಜೆಪಿ-ಜೆಡಿಎಸ್ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗುವುದೆಂದು ಹೇಳಿದ್ದಾರೆ. ಈ ರೀತಿ ತಾರತಮ್ಯ ಮಾಡಿ, ಕೇಂದ್ರದ ಮೇಲೆ ತಾರತಮ್ಯದ ಆರೋಪ ಹೊರಿಸುತ್ತಿದ್ದಾರೆ. ಎಲ್ಲ ಶಾಸಕರಿಗೆ ಸಮಾನ ಅನುದಾನ ನೀಡಬೇಕು. ಇದರಿಂದ ಸಮಾನ ಅಭಿವೃದ್ಧಿ ಸಾಧ್ಯ.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ







