ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಯಾರಾಗಲಿದ್ದಾರೆ ಮುಂದಿನ DCM?

ಬೆಂಗಳೂರು, ಮೇ 28: ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯ ನಡುವೆ, ಮುಂದಿನ DCM ಯಾರಾಗಲಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರುವ ಸಾಧ್ಯತೆಗಳು ದಟ್ಟವಾಗುತ್ತಿರುವ ನಡುವೆಯೇ, ನೂತನ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಯಾರಿಗೆ ಸಿಗಲಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ತೀವ್ರಗೊಂಡಿದೆ.
ನಾಯಕತ್ವ ಬದಲಾವಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸರಣಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ವಸತಿ ಸಚಿವ ಝಮೀರ್ ಅಹಮದ್ ಖಾನ್ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಸಾಮಾಜಿಕ ಸಮೀಕರಣ, ಪ್ರಾದೇಶಿಕ ಪ್ರತಿನಿಧಿತ್ವ ಹಾಗೂ ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಡಿಸಿಎಂ ಹುದ್ದೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದಲಿತ ಸಮುದಾಯದ ಪ್ರಮುಖ ನಾಯಕ ಹಾಗೂ ಅನುಭವಿ ಸಚಿವರಾಗಿರುವ ಡಾ. ಜಿ. ಪರಮೇಶ್ವರ್ ಅವರ ಹೆಸರು ಬಲವಾಗಿ ಚರ್ಚೆಯಲ್ಲಿದೆ. ಆಡಳಿತಾತ್ಮಕ ಅನುಭವ ಮತ್ತು ಹಿರಿಯತ್ವದ ಆಧಾರದ ಮೇಲೆ ಅವರಿಗೆ ಆದ್ಯತೆ ಸಿಗಬಹುದು ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್ ಅವರ ಹೆಸರೂ ಪ್ರಮುಖವಾಗಿ ಕೇಳಿಬರುತ್ತಿದೆ. ಲಿಂಗಾಯತ ಸಮುದಾಯದ ಪ್ರಭಾವಿ ಮುಖವಾಗಿರುವ ಅವರು ಪಕ್ಷ ಸಂಘಟನೆ ಮತ್ತು ಸರ್ಕಾರದೊಳಗೂ ಮಹತ್ವದ ಪಾತ್ರವಹಿಸಿದ್ದಾರೆ.
ಕಲಬುರಗಿ ಭಾಗದ ನಾಯಕ ಹಾಗೂ ಯುವ ಮುಖಂಡರಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರಿಗೂ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರನ್ನೂ ಕೆಲ ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ವಸತಿ ಸಚಿವ ಝಮೀರ್ ಅಹಮ್ಮದ್ ಖಾನ್ ಕೂಡ ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ‘ಉಪಮುಖ್ಯಮಂತ್ರಿ ಸ್ಥಾನವೂ ಸೇರಿದಂತೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ’ ಎಂದು ಅವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಒಂದು ಅಥವಾ ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತಾಗಿಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ವೇಗ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಮುಂದಿನ ನಡೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.






