ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯಬೇಕು: ಬಸವರಾಜ ರಾಯರಡ್ಡಿ

ಬಸವರಾಜ ರಾಯರಡ್ಡಿ
ಬೆಂಗಳೂರು: ರಾಜ್ಯ ಸರಕಾರವು ಯಶಸ್ವಿಯಾಗಿ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ. ಮುಂದಿನ ಎರಡು ವರ್ಷಗಳ ಅವಧಿಗೂ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೆ ಮುಂದುವರೆಯಬೇಕು ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಎಂದು ಆಗ್ರಹಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಜಿಎಸ್ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ನಾವಿದ್ದೇವೆ. ತಮಿಳುನಾಡು, ಗುಜರಾತ್ ಗಿಂತಲೂ ಮುಂದಿದ್ದೇವೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 1.25 ಕೋಟಿ ಮಹಿಳೆಯರಿಗೆ ಅವರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುತ್ತಿದ್ದೇವೆ. ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಅತ್ಯಂತ ಯಶಸ್ವಿಯಾಗಿದೆ. ನಿರುದ್ಯೋಗಿ ಯುವಕರಿಗೆ ಯುವ ನಿಧಿ ಯೋಜನೆಯಡಿ ಆರ್ಥಿಕ ನೆರವು ನೀಡುತ್ತಿದ್ದೇವೆ. 36 ಲಕ್ಷ ರೈತರ ಕೃಷಿ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದಲ್ಲದೆ, ಸಾಮಾಜಿಕ ಸುರಕ್ಷಾ ಯೋಜನೆಯಡಿ ಅಂಗವಿಕಲರು, ವೃದ್ಧರು, ಗರ್ಭಿಣಿ ಮಹಿಳೆಯರಿಗೆ ನೆರವು, ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ. ಈ ಆರ್ಥಿಕ ವರ್ಷದಲ್ಲಿ 82 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತಿದ್ದೇವೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ಅಗತ್ಯ:
ಸರಕಾರಕ್ಕೆ ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ ರಚನೆ ಅಗತ್ಯ. ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಗಳಿಗೆ ಬರಬೇಕು, ಸೋಮಾರಿಗಳಾಗಬಾರದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಸ್ವತಃ ಮಲ್ಲಿಕಾರ್ಜುನ ಖರ್ಗೆಯವರೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿ ಎಂದು ನಾನು ಹೇಳಿದ್ದೆ. ಆದರೆ, ತನಗೆ ವಯಸ್ಸಾಗಿರುವ ಕಾರಣ ತುಂಬ ಕಷ್ಟ ಆಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತನಗೆ ತಿಳಿಸಿದ್ದರು. ಆದುದರಿಂದ, ಮುಂದಿನ ಅವಧಿಗೂ ನಮ್ಮ ಸರಕಾರ ಅಧಿಕಾರಕ್ಕೆ ಬರಬೇಕಾದರೆ ಸಿದ್ದರಾಮಯ್ಯ ಮುಂದುವರೆಯಬೇಕು ಎಂದು ಬಸವರಾಜ ರಾಯರಡ್ಡಿ ಹೇಳಿದರು.






