ಸಿದ್ದರಾಮಯ್ಯ ವಿರುದ್ಧದ ʼಸ್ಟಿಂಗ್ʼ ಪ್ರಕರಣ; ಜೆಡಿಎಸ್ನ ಮೂವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವೀಡಿಯೋ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕಕ್ಕೆ ಸಂಬಂಧಿಸಿದ ಮೂವರಿಗೆ 66 ಸಿಸಿಎಚ್ ನ್ಯಾಯಾಲಯ ಷರತ್ತು ಬದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜೆಡಿಎಸ್ ನ ಮೋಹನ್ ಗೌಡ, ಚಂದನ್ ಹಾಗೂ ಪ್ರಜ್ವಲ್ ಪ್ರಸಾದ್ ಮೂವರು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮೂವರ ಮನವಿಯನ್ನು ಪುರಸ್ಕರಿಸುವ ನ್ಯಾಯಾಲಯ ಮೂವರಿಗೂ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆದರೆ, ನಾಳೆ (ಅಕ್ಟೋಬರ್ 30) ಈ ಮೂವರು ಹಾಗೂ ರಾಕೇಶ್ ಶೆಟ್ಟಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇದ್ದು, ಒಂದು ವೇಳೆ ಈ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದರೆ, ನಾಲ್ವರು ಪೊಲೀಸರಿಗೆ ಶರಣಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಹೀಗಾಗಿ ನಾಳೆ ನಡೆಯುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕ ಕೂಡಲೇ ವಿಚಾರಣೆಗೆ ಮೋಹನ್ ಗೌಡ ಹಾಜರು :
ಇನ್ನೂ ಪ್ರಕರಣದಲ್ಲಿ ನೊಟೀಸ್ ಜಾರಿಯಾಗುತ್ತಿದ್ದಂತೆ ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಮೋಹನ್ ಗೌಡ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು ಎರಡು ಗಂಟೆಗಳಿಂದ ಮೋಹನ್ ಗೌಡ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.






