ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ; ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿಲ್ಲ: ಶಾಸಕ ರಾಯರೆಡ್ಡಿ

ಬೆಂಗಳೂರು, ಅ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ. ಅವರ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ತಪ್ಪು ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಆಕ್ಷೇಪಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ. ತಮ್ಮ ಸಂಪುಟದಲ್ಲಿ 7 ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂಗಾಯತ ಸಮುದಾಯದ ಮೂರು ಜಿಲ್ಲಾಧಿಕಾರಿಗಳು, 7 ಎಸ್ಪಿಗಳು, 13 ವಿಶ್ವ ವಿದ್ಯಾಲಯದ ಕುಲಪತಿಗಳು, ನಾಲ್ಕು ಮಂದಿ ಸಿಇಒಗಳು ಹಾಗೂ ಮುಖ್ಯ ಇಂಜಿನಿಯರ್ ಗಳು ಇದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಜಾತಿ ಆಧಾರದಲ್ಲಿ ಪೋಸ್ಟಿಂಗ್ ಕೊಡಲು ಆಗಲ್ಲ. ಆದರೆ ಮಂತ್ರಿ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕೊಡುತ್ತೇವೆ. ಜಾತಿ ಆಧಾರದಲ್ಲಿ ಮಂತ್ರಿ ಮಾಡುವುದು ಸಹಜ. ಪ್ರಧಾನಿ ಯಾರು ಬೇಕಾದರೂ ಆಗಬಹುದು, ಆದರೆ ಗುಮಾಸ್ತ ಆಗಲು ಮಾನದಂಡವಿದೆ ಎಂದ ಅವರು, ಸಿದ್ದರಾಮಯ್ಯ ಅವರು ಬಸವೇಶ್ವರ ಭಾವಚಿತ್ರ ಸರಕಾರಿ ಕಚೇರಿಯಲ್ಲಿ ಹಾಕಿಸಲು ಆದೇಶ ಮಾಡಿದ್ದಾರೆ. ಲಿಂಗಾಯತ ಮುಖ್ಯಮಂತ್ರಿ ಸಾಕಷ್ಟು ಮಂದಿ ಆಗಿದ್ದರೂ ಬಸವೇಶ್ವರ ಫೋಟೋ ಏಕೆ ಹಾಕಿರಲಿಲ್ಲ? ಎಂದು ಪ್ರಶ್ನೆ ಮಾಡಿದರು.
ಅಧಿಕಾರಿಗಳ ಬಗ್ಗೆ ಜಾತಿ ಆಧಾರದಲ್ಲಿ ಮಾತನಾಡುವುದೇ ತಪ್ಪು. ಹೀಗೆ ಆದರೆ ನಾಳೆ ಒಕ್ಕಲಿಗರು, ಕುರುಬರು ಮಾತನಾಡುತ್ತಾರೆ. ಹೀಗಾದರೆ ಆಡಳಿತ ನಡೆಸುವುದು ಹೇಗೆ? ಶಾಮನೂರು ಹೇಳಿಕೆ ಪರಿಣಾಮ ಆಡಳಿತದ ಮೇಲೆ ಬೀರುತ್ತದೆ.ಇನ್ನೂ, ಸರಕಾರದ ಬಗ್ಗೆ ಲಿಂಗಾಯತ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷದವರು ಹೇಳಿದಂತೆ ಬಹುಮತವುಳ್ಳ ನಮ್ಮ ಸರಕಾರಕ್ಕೆ ಏನು ಆಗುವುದಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಸಮಸ್ಯೆ ಗೊಂದಲಗಳಿಲ್ಲ. ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿ ಹೆಚ್ಚಿರುವುದರಿಂದ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ನುಡಿದರು.
ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ಧಪಡಿಸಲಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಸರಕಾರ ಸ್ವೀಕರಿಸಿ ಬಿಡುಗಡೆ ಮಾಡಬೇಕು. ಇದರಿಂದ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.







