ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮನಸ್ಸಿಗೆ ನೋವು ತಂದಿದೆ : ಮಾಜಿ ಸಚಿವ ಬಿ.ಸಿ.ಪಾಟೀಲ್

Photo credit : X@bcpatilkourava
ಬೆಂಗಳೂರು: ನಾನು ಆ ಪಕ್ಷದಲ್ಲಿ ಇಲ್ಲದೇ ಇರಬಹುದು. ಆದರೆ, ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವು ಕೊಡುತ್ತಿದೆ ಎಂದು ಮಾಜಿ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸಮಾಜಿಕ ಜಾಲತಾಣ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ಪೊಲೀಸ್ ಅಧಿಕಾರಿಯಾಗಿದ್ದಾಗಿನಿಂದಲೇ ಅವರನ್ನು ನೋಡಿದ್ದೇನೆ. 2004ರಿಂದ ಶಾಸಕನಾಗಿ ಅವರೊಂದಿಗಿದ್ದೆ. 2006ರಲ್ಲಿ ಅವರು ಕಾಂಗ್ರೆಸ್ಗೆ ಹೋಗಿ ಚುನಾವಣೆಗೆ ಸ್ಪರ್ಧಿಸಿದಾಗ ವಿರೋಧಿಸಿದ್ದೂ ಇದೆ. ಆದರೆ, ನಾನು 2008ರಲ್ಲಿ ಕಾಂಗ್ರೆಸ್ಗೆ ಬಂದ ಬಳಿಕ ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನನ್ನ ಎಲ್ಲಾ ಚುನಾವಣೆಗಳಲ್ಲಿಯೂ ಸಹಾಯ ಮಾಡಿದ್ದಾರೆ. ನನ್ನನ್ನು ಅತ್ಯಂತ ಆತ್ಮೀಯತೆಯಿಂದ ‘ಬಿಸಿ’ ಎಂದೇ ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
2013ರಲ್ಲಿ ನಾನು ಸೋತಾಗಲೂ ನನ್ನ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಅದನ್ನು ನಾನು ಎಂದಿಗೂ ಮರೆಯಲ್ಲ. ನನ್ನ ಕ್ಷೇತ್ರದ ಜನರೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಗತ್ತು ಮತ್ತು ಗಾಂಭೀರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದುಕೊಟ್ಟಿತ್ತು. ಅಧಿಕಾರ ಶಾಶ್ವತವಲ್ಲ. ಆದರೆ, ಅವರು ಅಧಿಕಾರ ಬಿಟ್ಟು ಕೆಳಗಿಳಿದಾಗ ನನಗೆ ಬಹಳ ನೋವುಂಟಾಗಿದೆ. ಅವರ ಬಗ್ಗೆ ಇದ್ದ ಗೌರವ ಮತ್ತು ಪ್ರೀತಿಯೇ ಇದಕ್ಕೆ ಕಾರಣ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ನನ್ನ ಮನೆಗೆ ಎಷ್ಟು ಬಾರಿ ಬಂದಿದ್ದಾರೋ ಗೊತ್ತಿಲ್ಲ. ಕರೆದಾಗಲೆಲ್ಲ ಬರುತ್ತಿದ್ದರು. ಪ್ರೀತಿ ಹಂಚಿಕೊಳ್ಳುತ್ತಿದ್ದರು. 2023ರ ನಂತರ ಮುಖ್ಯಮಂತ್ರಿಯಾದ ಮೇಲೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಒಮ್ಮೆ ದೆಹಲಿಯಲ್ಲಿ ಭೇಟಿಯಾದಾಗ ಅಪಾರ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡಿಸಿ ಬೆನ್ನು ತಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಒಬ್ಬ ಇತಿಹಾಸಕಾರ, ಅರ್ಥಶಾಸ್ತ್ರಜ್ಞ, ಚಾಣಾಕ್ಷ, ಹೃದಯವಂತ ಹಾಗೂ ನೇರ ನಿಷ್ಠುರ ನುಡಿಗೆ ಹೆಸರಾದವರು. ಮುಂದಿನ ದಿನಗಳಲ್ಲಿ ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ ಯುವಕರಿಗೆ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದ್ದಾರೆ.






