ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಸ್ಪೀಕರ್ ಯು.ಟಿ.ಖಾದರ್

ಪ್ರೌಢ ಶಾಲೆಯಲ್ಲಿ ಸ್ಕೌಟ್ಸ್ ಸಮವಸ್ತ್ರದಲ್ಲಿ ಯು.ಟಿ.ಖಾದರ್/ ಹೊಸದಿಲ್ಲಿಯಲ್ಲಿ ಭಾರತ್ ಸ್ಕೌಟ್& ಗೈಡ್ಸ್ನ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯು.ಟಿ.ಖಾದರ್
ಹೊಸದಿಲ್ಲಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀಡುವ ʼಸಿಲ್ವರ್ ಎಲಿಫೆಂಟ್ʼ ರಾಷ್ಟ್ರೀಯ ಪ್ರಶಸ್ತಿಗೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಆಯ್ಕೆಯಾಗಿದ್ದಾರೆ.
ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀಡುವ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಮಿಝೋರಾಂ ಮುಖ್ಯಮಂತ್ರಿ ಪು ಲಾಲ್ ಡುಹೋಮ ಹಾಗೂ ಏಷ್ಯಾ ಪೆಸಿಫಿಕ್ ರೀಜನಲ್ ಸ್ಕೌಟ್ ಕಮಿಟಿಯ ಅಧ್ಯಕ್ಷ ಮಲೇಷ್ಯಾದ ಡಾಟೋ ಡಾ.ಮುಹಮ್ಮದ್ ಝಿನ್ ಬಿನ್ ಬಿದಿನ್ ರವರೊಂದಿಗೆ ಸ್ಪೀಕರ್ ಖಾದರ್ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಯನ್ನು ಯು.ಟಿ.ಖಾದರ್ ಅವರಿಗೆ ನೀಡುತ್ತಿದ್ದೇವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ ಸಮಿತಿಯು ತಿಳಿಸಿದೆ.
ನವೆಂಬರ್ 26 ರಂದು ಲಕ್ನೋದಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಜ್ರಮಹೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ.ಕೆ.ಕೆ.ಖಂಡೇಲ್ವಾಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.







