‘SIR’ ಸಿಎಂ ತಾಯಿಗೆ ನೋಟಿಸ್ ನೀಡಿಲ್ಲ: ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಸ್ಪಷ್ಟನೆ

ಸಾಂದರ್ಭಿಕ ಚಿತ್ರ
ರಾಮನಗರ : ದೃಶ್ಯ ಮಾಧ್ಯಮಗಳಲ್ಲಿ ಮುಖ್ಯಮಂತ್ರಿಯವರ ತಾಯಿಗೆ ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನೋಟಿಸ್ ನೀಡಲಾಗಿದೆ ಎಂಬ ಶೀರ್ಷಿಕೆಯಡಿ ಪ್ರಸಾರವಾಗುತ್ತಿರುವ ಸುದ್ದಿ ವಾಸ್ತವಾಂಶಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಸ್ಪಷ್ಟಣೆ ನೀಡಿದೆ.
ಈ ಕುರಿತು ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ನಂ. 184-ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 249ರ ಮತಗಟ್ಟೆ ಅಧಿಕಾರಿಯವರ ವರದಿಯ ಆಧಾರದ ಮೇಲೆ ವಾಸ್ತವಾಂಶವನ್ನು ಪರಿಶೀಲಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಗೌರಮ್ಮ ಎಂಬ ಹೆಸರಿನ ಒಟ್ಟು ಮೂವರು ಮತದಾರರು ನಮೂದಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿಯ ತಾಯಿ ಗೌರಮ್ಮ ಅವರಿಗೆ ಎಸ್ಐಆರ್ ಸಂಬಂಧ ಯಾವುದೆ ನೋಟೀಸ್ ನೀಡಿಲ್ಲ. ಸದರಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಇದೇ ಹೆಸರಿನ ಬೇರೆ ಇಬ್ಬರು ಮತದಾರರಿಗೆ ಮಾತ್ರ ನೋಟೀಸು ನೀಡಲಾಗಿದೆ. ಆದುದರಿಂದ, ಹೆಸರಿನ ಸಾಮ್ಯತೆಯ ಕಾರಣದಿಂದ ಈ ಗೊಂದಲ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






