ʼSIRʼ ಅಂತಿಮ ಪಟ್ಟಿ ತಿರಸ್ಕರಿಸಿ ಸಾಮಾಜಿಕ ಪರಿಶೋಧನೆ ನಡೆಸಿ : ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ
"ನ.26ರಿಂದ ದೇಶಾದ್ಯಂತ ಪ್ರಜಾಪ್ರಭುತ್ವ ಮರುಸ್ಥಾಪನಾ ಅಭಿಯಾನ"

ಬೆಂಗಳೂರು : ಕರ್ನಾಟಕದಲ್ಲಿ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವ್ಯಾಪಕ ಲೋಪಗಳಾಗಿದ್ದು, ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ಪಟ್ಟಿಯಿಂದ ಕೈಬಿಡಲಾದ, ನೋಂದಣಿಯಾಗದೆ ಉಳಿದಿರುವ ಅರ್ಹ ಮತದಾರರನ್ನು ಗುರುತಿಸಲು ಕೂಡಲೇ ಸ್ವತಂತ್ರ ಸಾಮಾಜಿಕ ಪರಿಶೋಧನೆ ನಡೆಸಬೇಕು ಎಂದು ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟದ ಮುಖಂಡ ನೂರ್ ಶ್ರೀಧರ್ ಆಗ್ರಹಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮೂನೆ-6ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಚುನಾವಣಾ ಆಯೋಗ ಹೇಳಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಸ ಮತದಾರರ ನೋಂದಣಿಗೆ ಬಳಸಬೇಕಾದ ನಮೂನೆ-6 ಅನ್ನು ಈಗಾಗಲೇ ಮತಪಟ್ಟಿಯಲ್ಲಿದ್ದರೂ ತಪ್ಪಾಗಿ ಹೆಸರು ಅಳಿಸಲ್ಪಟ್ಟವರಿಗೆ ನೀಡಿರುವುದಕ್ಕೆ ಆಯೋಗದ ಬಳಿ ಉತ್ತರವಿಲ್ಲ. ಇದರಿಂದ ಹಳೆಯ ಮತದಾರರ ಗುರುತು ಮತ್ತು ನೋಂದಣಿಯ ಇತಿಹಾಸಕ್ಕೆ ಧಕ್ಕೆಯಾಗಿದೆ ಎಂದರು.
ನ.6ರಂದು ಎಸ್‍ಐಆರ್ ಮುಂದುವರಿದಿರುವ ದಿಲ್ಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ಚುನಾವಣಾ ಆಯೋಗ ಹೊಸ ಸುತ್ತೋಲೆ ಹೊರಡಿಸಿದೆ. ಅದರಂತೆ ಎಎಸ್‍ಡಿಡಿಒ ಪಟ್ಟಿಯಲ್ಲಿ ಡಿಲೀಟ್ ಎಂದು ಗುರುತಿಸಲಾದ ಮತದಾರರ ಹೆಸರುಗಳನ್ನು ಪ್ರತಿ ಬೂತ್‍ನಲ್ಲೂ ಪ್ರಕಟಿಸಬೇಕು. ಮನೆಮನೆಗೆ ಭೇಟಿ, ಅಕ್ಕಪಕ್ಕದವರಿಂದ ಮಾಹಿತಿ ಸಂಗ್ರಹ ಹಾಗೂ ದೂರವಾಣಿ ಸಂಪರ್ಕದ ಮೂಲಕ ಅವರನ್ನು ಪತ್ತೆಹಚ್ಚಿ ಮರುನೋಂದಣಿಗೆ ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಲಾಗಿದೆ. ಇದೇ ಕ್ರಮವನ್ನು ಕರ್ನಾಟಕಕ್ಕೂ ಅನ್ವಯಿಸಬೇಕು ಎಂದು ನೂರ್ ಶ್ರೀಧರ್ ಒತ್ತಾಯಿಸಿದರು.
ಕರ್ನಾಟಕದ ನಾಗರಿಕ ಸಂಘಟನೆಗಳು ಇದೇ ವಿಚಾರವಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಚುನಾವಣಾ ಆಯೋಗ ಸ್ಪಂದಿಸಿಲ್ಲ. ಏಳು ರಾಜ್ಯಗಳಿಗೆ ನೀಡಿರುವ ಮಾರ್ಗಸೂಚಿಯನ್ನು ಕರ್ನಾಟಕಕ್ಕೆ ಅನ್ವಯಿಸದಿರುವುದೇಕೆ? 'ಪರ್ಮನೆಂಟ್ಲಿ ಶಿಫ್ಟೆಡ್' ಎಂದು ತಪ್ಪಾಗಿ ಗುರುತಿಸಿ ಲಕ್ಷಾಂತರ ಮತದಾರರನ್ನು ಕೈಬಿಟ್ಟಿರುವುದನ್ನು ಹಾಗೂ ಹಳೆಯ ಮತದಾರರಿಗೆ ತಪ್ಪಾಗಿ ನಮೂನೆ-6 ನೀಡಿ ಹೊಸ ಮತದಾರರಂತೆ ಮರುನೋಂದಣಿ ಮಾಡಿರುವುದನ್ನು ಸರಿಪಡಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.
ಸರಕಾರಿ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಸುಮಾರು 5.2 ಕೋಟಿ ಇದೆ. ಆದರೆ ಮತದಾರರ ಪಟ್ಟಿಯಲ್ಲಿ ಸುಮಾರು 4.5 ಕೋಟಿ ಜನರು ಮಾತ್ರ ಉಳಿದಿದ್ದಾರೆ. ಹಾಗಾದರೆ ಉಳಿದ ಸುಮಾರು 70 ಲಕ್ಷ ಜನರು ಎಲ್ಲಿ ಹೋದರು? ಚುನಾವಣಾ ಆಯೋಗ ಉತ್ತರಿಸಬೇಕು. ಗಾಂಧಿನಗರ, ರಾಜಾಜಿನಗರ ಮತ್ತು ಬಸವನಗುಡಿ ಕ್ಷೇತ್ರಗಳಲ್ಲಿ ಪ್ರಸ್ತುತ ಪಟ್ಟಿಯಲ್ಲಿರುವ ಮತದಾರರಿಗಿಂತ 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಮತ ಚಲಾಯಿಸಿದ್ದಾರೆ. ಹಾಗಾದರೆ ಅವರೆಲ್ಲ ಈಗ ಎಲ್ಲಿದ್ದಾರೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಎಸ್‍ಐಆರ್ ಸರಿಯಾಗಿ ನಡೆದಿದೆ ಎಂದು ಹೇಳುತ್ತಿರುವ ಚುನಾವಣಾ ಆಯೋಗ ಈಗ ಡಿ.1ರಿಂದ ಜ.1ರ ವರೆಗೆ ಎಸ್‍ಎಸ್‍ಆರ್ ನಡೆಸಲು ಮುಂದಾಗಿದೆ. ಈ ಮೂಲಕ ಬಿಟ್ಟುಹೋದ ಮತದಾರರು ಹಾಗೂ ಹೊಸ ಮತದಾರರನ್ನು ಸೇರ್ಪಡೆ ಮಾಡಿಕೊಳ್ಳುವ ಅಭಿಯಾನ ನಡೆಸುವುದಾಗಿ ಹೇಳಿದೆ. ಎಸ್‍ಐಆರ್ ಸರಿಯಾಗಿ ನಡೆದಿದ್ದರೆ ಈಗ ಮತ್ತೆ ಎಸ್‍ಎಸ್‍ಆರ್ ನಡೆಸುವ ಅಗತ್ಯವೇನು? ಮತದಾರರನ್ನು ಕೈಬಿಟ್ಟಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಸಮರ್ಪಕ ಪರಿಶೀಲನೆ ನಡೆಸದೆ ಮತ್ತೊಂದು ಪ್ರಕ್ರಿಯೆ ಆರಂಭಿಸಿರುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಎಸ್‍ಎಸ್‍ಆರ್ ಪ್ರಕ್ರಿಯೆಯನ್ನು ಒಕ್ಕೂಟ ತಿರಸ್ಕರಿಸುತ್ತದೆ ಎಂದು ನೂರ್ ತಿಳಿಸಿದರು.
ರೈತ ಮುಖಂಡ ವೀರಸಂಗಯ್ಯ ಮಾತನಾಡಿ, ಎಸ್‍ಐಆರ್ ವಿರುದ್ಧ ಕರ್ನಾಟಕದ ಕೆಲವು ಕಾಂಗ್ರೆಸ್ ಸಚಿವರು ದ್ವಂದ್ವ ನಿಲುವು ತಾಳುತ್ತಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ಬದಲಿಗೆ ಲಾಭವಾಗಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಕೆಲವರು ಡಿಲೀಟ್ ಆಗಿರುವವರು ಉತ್ತರ ಭಾರತದ ಬಿಜೆಪಿ ಮತದಾರರು ಎಂಬ ಅಭಿಪ್ರಾಯವನ್ನು ಹರಡುತ್ತಿದ್ದಾರೆ. ತಮ್ಮ ಕ್ಷೇತ್ರದ ಲಾಭ-ನಷ್ಟಗಳನ್ನು ಮಾತ್ರ ಲೆಕ್ಕಹಾಕಿ ಎಸ್‍ಐಆರ್ ಅಂತಿಮ ಪಟ್ಟಿಯನ್ನೇ ಒಪ್ಪಿಕೊಂಡು ಅದರಲ್ಲೇ ಮತದಾರರನ್ನು ಸೇರ್ಪಡೆ ಮಾಡೋಣ ಎನ್ನುವುದು ಸಂಕುಚಿತ ರಾಜಕಾರಣವಾಗಿದೆ. ಸಚಿವರ ಈ ಧೋರಣೆಯನ್ನು ಕಾಂಗ್ರೆಸ್ ನಾಯಕತ್ವ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಸ್‍ಐಆರ್ ಅಂತಿಮ ಪಟ್ಟಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಡಿಲೀಟ್ ಆಗಿರುವ ಹಾಗೂ ನೋಂದಣಿಯಾಗದೆ ಉಳಿದಿರುವ ಅರ್ಹ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸಲು ರಾಜ್ಯ ಸರಕಾರ ಸ್ವತಂತ್ರ ಮತ್ತು ವ್ಯವಸ್ಥಿತ ಸಾಮಾಜಿಕ ಪರಿಶೋಧನಾ ಅಭಿಯಾನ ನಡೆಸಬೇಕು. ಸಾಮಾಜಿಕ ಪರಿಶೋಧನೆಯ ಮೂಲಕ ಪರಿಷ್ಕೃ ತಗೊಂಡ 2025ರ ಮತದಾರರ ಪಟ್ಟಿಯ ಆಧಾರದಲ್ಲಿಯೇ ಸ್ಥಳೀಯ ಚುನಾವಣೆಗಳನ್ನು ನಡೆಸಬೇಕು ಎಂದು ವೀರಸಂಗಯ್ಯ ಆಗ್ರಹಿಸಿದರು.
ದಲಿತ ಮುಖಂಡ ವಿ.ನಾಗರಾಜ್ ಮಾತನಾಡಿ, ‘ಪೀಪಲ್ ಅಗೆನೆಸ್ಟ್ ಎಸ್‍ಐಆರ್’ ವೇದಿಕೆ ವತಿಯಿಂದ ನ.26ರ ಸಂವಿಧಾನ ದಿನದಿಂದ ‘ಪ್ರಜಾಪ್ರಭುತ್ವ ಮರುಸ್ಥಾಪನಾ ಅಭಿಯಾನ' ಆರಂಭಿಸಲಾಗುವುದು. ಮತದಾನದ ಹಕ್ಕು, ಪ್ರತಿಭಟಿಸುವ ಹಕ್ಕು ಹಾಗೂ ಜೀವಿಸುವ ಹಕ್ಕುಗಳ ರಕ್ಷಣೆಗಾಗಿ ದೇಶವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ನ.26ರಂದು ದಿಲ್ಲಿ, ಬೆಂಗಳೂರು ಸೇರಿದಂತೆ ದೇಶದ 100 ನಗರಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ. ಎಸ್‍ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಚು.ಆಯೋಗದ ಆಯ್ಕೆ ವಿಧಾನದಲ್ಲಿ ಬದಲಾವಣೆ ತರಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪರಿಣಾಮಕಾರಿಯಾದ ‘ಪ್ರಜಾ ಪಾರ್ಲಿಮೆಂಟ್' ಆಯೋಜಿಸಲಾಗುವುದು. ಇದರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಎಸ್‍ಐಆರ್‍ನ ನೈಜ ಸ್ಥಿತಿಯನ್ನು ತಳಮಟ್ಟದ ಪರಿಶೋಧನೆಗಳ ಮೂಲಕ ಬಹಿರಂಗಪಡಿಸಲು ನ.20ರಿಂದ ಡಿ.20ರ ವರೆಗೆ ರಾಜ್ಯಾದ್ಯಂತ ಪರಿಶೋಧನಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಡಿ.20ರಂದು ರಾಜ್ಯದ ವಿವಿಧೆಡೆ ಬೂತ್ ಮಟ್ಟದ ಸಾರ್ವಜನಿಕ ವಿಚಾರಣೆಗಳನ್ನು ಆಯೋಜಿಸಲಾಗುವುದು ಎಂದು ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಐಆರ್ ವಿರೋಧಿ ಒಕ್ಕೂಟದ ಮುಖಂಡರಾದ ಅಮ್ಜದ್ ಪಾಷಾ, ನಾಗೇಶ್ ಅರಳಕುಪ್ಪೆ, ಹೈದರ್ ಬೇಗ್, ಶ್ರೀಮತಿ ಉಪಸ್ಥಿತರಿದ್ದರು.






