‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’: ಬಿಜೆಪಿಗರ ಮುಂದುವರೆದ ಚುನಾವಣಾ ಕುತಂತ್ರದ ಭಾಗ ಎಂದ ಡಾ.ಎಚ್.ಸಿ. ಮಹದೇವಪ್ಪ

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ಬಹುತೇಕ ಜನ ಸಾಮಾನ್ಯರ ಬದುಕಿನ ವಿಷಯದಲ್ಲಿ ಅಷ್ಟೇನು ಆಸಕ್ತಿ ವಹಿಸದೆ ಕೇವಲ ಚುನಾವಣೆ, ದೇವರು, ಧರ್ಮ ಎಂದುಕೊಂಡು ಬದುಕಿರುವ ಬಿಜೆಪಿಗರು ಇದೀಗ ಬಿಹಾರದ ಚುನಾವಣೆ ಹತ್ತಿರ ಇರುವ ಸಂದರ್ಭ ನೋಡಿಕೊಂಡು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’(ಎಸ್ಐಆರ್) ಎಂಬ ಹೊಸ ತಂತ್ರವನ್ನು ಬಳಸಲು ಆರಂಭಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಾರಿಯ ಸಮೀಕ್ಷೆಗಳು ಎನ್ಡಿಎ ಮಿತ್ರಕೂಟದ ಪಕ್ಷಗಳ ಪರವಾಗಿ ಇಲ್ಲವೆಂಬ ಸುದ್ದಿಯನ್ನು ಕೇಳಿದಾಕ್ಷಣ, ಎಚ್ಚರಿಕೆ ವಹಿಸಿರುವ ಬಿಜೆಪಿಗರು, ಮತದಾನದ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಂಬ ಹೊಸ ಕುತಂತ್ರವನ್ನು ಪ್ರಯೋಗ ಮಾಡುತ್ತಿದ್ದು, ಇದು ಬಿಹಾರದ ಪ್ರಜ್ಞಾವಂತರ ವಲಯದಲ್ಲಿ ಟೀಕೆಗೆ ಗುರಿಯಾಗಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ಕೇವಲ ಚುನಾವಣೆ ಮಾಡುವುದೊಂದೇ ಕೆಲಸ, ಜನ ಸಾಮಾನ್ಯರು ಏನಾದರೂ ಆಗಲಿ ಎಂಬಂತೆ ಯೋಚಿಸಿ, ಅದೇ ರೀತಿಯಲ್ಲಿ ನಡೆದುಕೊಳ್ಳುವ ಬಿಜೆಪಿಗರು, ಜನಾಭಿಪ್ರಾಯವು ತಮ್ಮ ವಿರುದ್ಧ ಇದೆ ಎಂದಾಗಲೆಲ್ಲಾ ಐಟಿ, ಈಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ಢಾಳಾಗಿ ಬಳಸಿಕೊಂಡಂತಹ ಉದಾಹರಣೆ ಇದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಇದು ಸಾಲದು ಎಂಬಂತೆ ಆಪರೇಷನ್ ಕಮಲದಂತಹ ಕೆಟ್ಟ ಪ್ರವೃತ್ತಿಯೂ ಸಹ ಶುರುವಾಗಿದ್ದು ಇವರಿಂದಲೇ. ಇನ್ನು ಧಾರ್ಮಿಕ ಅಸಹನೆಯ ಕಾರಣದಿಂದಾಗಿ ಇವರು ಜಾರಿ ಮಾಡಲು ಹೊರಟಿದ್ದ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಗಳೂ ಸಹ ಬಿಜೆಪಿಯ ಕೆಟ್ಟ ರಾಜಕೀಯ ತಂತ್ರಗಳ ಒಂದು ಭಾಗವೇ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾ ರಾಜಕೀಯವನ್ನು ನಡೆಸಿದ ಇವರು, ಜಮ್ಮು ಕಾಶ್ಮೀರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಉಂಟು ಮಾಡಲು ಯತ್ನಿಸಿದ್ದರು. ಇನ್ನು ಮಧ್ಯಪ್ರದೇಶದಲ್ಲಿ ಇದ್ದ ಸರಕಾರವನ್ನು ಕೆಡವಿದ್ದ ಇವರು, ಗುಜರಾತ್ ನಲ್ಲಿ ಬಲವಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಮಿಷ ಒಡ್ಡಿ, ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಚುನಾವಣೆಗಳನ್ನು ನಡೆಸಿದರು. ಕರ್ನಾಟಕದಲ್ಲಿಯೂ ಸಹ ಇಂತಹದ್ದೇ ಪ್ರಯತ್ನಗಳನ್ನು ನಡೆಸಿದ್ದ ಇವರು ಜನಾಭಿಪ್ರಾಯದ ಎದುರು ತಲೆಬಾಗಿದ್ದನ್ನು ನಾವೆಲ್ಲರೂ ಕಂಡಿದ್ದೇವೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಈ ಸದ್ಯ ಬಹು ಚರ್ಚಿತ ವಿಷಯವಾಗಿರುವ ಬಿಹಾರ ಚುನಾವಣೆ ಹೊತ್ತಿನಲ್ಲಿ ಆಗುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ಯನ್ನು ಬಿಜೆಪಿಗರ ಚುನಾವಣಾ ಕುತಂತ್ರದ ಭಾಗವೆಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಪರಿಷ್ಕರಣೆ ನೆಪದಲ್ಲಿ ಪ್ರಾಂತ್ಯವಾರು ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಹೊರಗಿಡುವ ಸಂಚು ಮಾಡುತ್ತಿರುವ ಇವರು ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎನ್ನುವ ಬದಲು ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಇದ್ದಾರೆಯೇ? ಎಂದು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಮೂಲ ಮತದಾರರೆಲ್ಲರಿಗೂ ಎಣಿಕೆ ಪತ್ರವನ್ನು ತುಂಬಲು ಸೂಚಿಸಲಾಗಿದ್ದು ಇದೇ ಮೊದಲು ಇಂತಹ ಬೆಳವಣಿಗೆ ಬಿಹಾರದಲ್ಲಿ ನಡೆಯುತ್ತಿದ್ದು, ಎಲ್ಲರ ಅನುಮಾನಗಳಿಗೆ ಕಾರಣವಾಗಿದೆ. ಚುನಾವಣಾ ಗೆಲುವಿನ ದೃಷ್ಟಿಯಿಂದ ಬಿಜೆಪಿಗರು ತಾವು ಎಲ್ಲೆಲ್ಲಿ ದುರ್ಬಲರಾಗಿದ್ದಾರೋ ಅಲ್ಲೆಲ್ಲಾ ಇಂತಹ ಕೆಟ್ಟ ನೀತಿಯನ್ನು ಅನುಸರಿಸುವುದು ವಾಡಿಕೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೆಟ್ಟ ನೀತಿಗಳು ಸಾರ್ವಜನಿಕ ಅಭಿಪ್ರಾಯವನ್ನು ಅಗೌರವಿಸುವಂತಹ ಸಂಗತಿಯಾಗಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಒಂದು ವ್ಯಕ್ತಿ, ಒಂದು ಮೌಲ್ಯ ಎಂದು ಹೇಳಿದ, ಬಾಬಾ ಸಾಹೇಬರು ಕೇವಲ ಚುನಾವಣಾ ಮತದ ಮೌಲ್ಯವನ್ನು ಮಾತ್ರವೇ ನಮಗೆ ಹೇಳಿಲ್ಲ. ಬದಲಿಗೆ ವ್ಯಕ್ತಿಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಕುರಿತಾಗಿ ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವವನ್ನು ನಿರ್ಧರಿಸುವ ಒಂದು ಮತದ ಮೌಲ್ಯದಿಂದ ಸಾಮಾಜಿಕ ಐಕ್ಯತೆ ಮತ್ತು ರಾಜಕೀಯ ಸ್ವಾತಂತ್ರ್ಯ ಮೂಡಿ ಬರಬೇಕೆಂಬುದು ಬಾಬಾ ಸಾಹೇಬರ ಮೂಲ ಆಶಯ. ಆದರೆ ಮತದಾನ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ಹೊರಟಿರುವ ಬಿಜೆಪಿಗರ ಈ ಪ್ರಯತ್ನಗಳು ನಿಜಕ್ಕೂ ಬಾಬಾ ಸಾಹೇಬರ ಕಲ್ಪನೆಯ ಐಕ್ಯತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗೆ ವಿರುದ್ಧವಾಗಿದ್ದು ಇದು ದೇಶವನ್ನು ಆಂತರಿಕವಾಗಿ ದುಸ್ಥಿತಿಗೆ ತಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ ಆಗುತ್ತಿರುವ ಮತದಾನ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಮತ್ತು ಪ್ರಜ್ಞಾವಂತ ಮನಸ್ಸುಗಳೂ ಇದರ ವಿರುದ್ಧ ದನಿಯಾಗಬೇಕೆಂದು ಕೋರುತ್ತೇನೆ ಎಂದು ಮಹದೇವಪ್ಪ ಮನವಿ ಮಾಡಿದ್ದಾರೆ.







