SIR | 43.81ಲಕ್ಷ ಮತದಾರರಿಗೆ ನೋಟಿಸ್ ಪ್ರಕ್ರಿಯೆ ಆರಂಭ
ವಿಶೇಷ ನೋಂದಣಿ ಅಭಿಯಾನ: ಮತಗಟ್ಟೆಗಳಲ್ಲಿ ಬಿಎಲ್‍ಒಗಳು ಕಡ್ಡಾಯ ಹಾಜರಿ

ಬೆಂಗಳೂರು : ರಾಜ್ಯದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಲ್ಲಿ ಒಟ್ಟು 43,81,006 ಮತದಾರರಿಗೆ ನೋಟಿಸ್ ನೀಡಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ನೋಟಿಸ್‍ಗಳ ಸೃಷ್ಟಿ ಪ್ರಕ್ರಿಯೆ ಆ.28ರಿಂದ ಆರಂಭವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
ಶುಕ್ರವಾರ ಈ ಸಂಬಂಧ ಆಯೋಗವು ಪ್ರಕಟಣೆ ಬಿಡುಗಡೆ ಮಾಡಿದ್ದು, ಆ.28ರ ವೇಳೆಗೆ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಒಟ್ಟು 4,46,35,948 ಮತದಾರರಿದ್ದಾರೆ. ಈ ಪೈಕಿ 2,21,59,229 ಪುರುಷರು, 2,24,73,848 ಮಹಿಳೆಯರು ಹಾಗೂ 2,871 ತೃತೀಯಲಿಂಗಿ ಮತದಾರರು. ಒಟ್ಟು ಮತದಾರರ ಪೈಕಿ ಸುಮಾರು 9.82ರಷ್ಟು ಮಂದಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್‍ಗಳ ಸೃಷ್ಟಿ ಆ.28 ರಿಂದಲೇ ಆರಂಭವಾಗಿದ್ದು, ಅದರ ವಿವರವಾದ ಅಂಕಿಅಂಶಗಳನ್ನು ನಂತರ ನೀಡಲಾಗುವುದು ಎಂದು ಹೇಳಿದೆ.
ನೋಟಿಸ್ ಹಂತದ ಕಾರ್ಯಕ್ಕಾಗಿ ರಾಜ್ಯದಲ್ಲಿ ಒಟ್ಟು 4,262 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (ಎಇಆರ್ ಒ)ಗಳು ಹಾಗೂ ಹೆಚ್ಚುವರಿ ಎಇಆರ್ ಒಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಎಇಆರ್ ಒಗಳ ನೇಮಕಕ್ಕೆ ಸಂಬಂಧಿಸಿದಂತೆ ಆ.27ರಂದು ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 13(ಸಿ)(1)ರ ಅನ್ವಯ ಸರಕಾರದ ಅಧಿಕಾರಿಗಳನ್ನು ಹೆಚ್ಚುವರಿ ಎಇಆರ್ ಒ ಗಳಾಗಿ ನೇಮಕ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ವಿಶೇಷ ನೋಂದಣಿ ಅಭಿಯಾನ: ಎಸ್‍ಐಆರ್ ಭಾಗವಾಗಿ ಮತದಾರರ ನೋಂದಣಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ನಾಲ್ಕು ದಿನಗಳ ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಚುನಾವಣಾಧಿಕಾರಿ ಕಚೇರಿ ಹೊರಡಿಸಿರುವ ಆದೇಶದ ಪ್ರಕಾರ, ಆ.29 (ಶನಿವಾರ), ಆ.30(ರವಿವಾರ), ಸೆ.19(ಶನಿವಾರ) ಹಾಗೂ ಸೆ.20(ರವಿವಾರ) ವಿಶೇಷ ಅಭಿಯಾನ ನಡೆಯಲಿದೆ. ಈ ಕುರಿತು ಚುನಾವಣಾ ಆಯೋಗ ಈಗಾಗಲೇ ಅನುಮೋದನೆ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಶೇಷ ಅಭಿಯಾನದ ನಾಲ್ಕೂ ದಿನಗಳಲ್ಲಿ ಬಿಎಲ್‍ಒಗಳು ಮತಗಟ್ಟೆಗಳಲ್ಲಿ ಹಾಜರಿರಬೇಕು. ಮತದಾರರು ತಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಲು ಬಿಎಲ್‍ಒಗಳು ನೆರವು ನೀಡಬೇಕು. ಅಲ್ಲದೆ, ನಮೂನೆ-6, ನಮೂನೆ-6ಎ, ನಮೂನೆ-7 ಮತ್ತು ನಮೂನೆ-8 ಅರ್ಜಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮತದಾರರಿಂದ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿ, ಅವುಗಳನ್ನು ಬಿಎಲ್‍ಒ ಆಪ್‍ನಲ್ಲಿ ಡಿಜಿಟಲೀಕರಣಗೊಳಿಸಬೇಕು ಎಂದು ಆದೇಶಿಸಲಾಗಿದೆ.
ವಿಶೇಷ ಅಭಿಯಾನದ ದಿನದಂದು ಸ್ವೀಕರಿಸಿದ ಅರ್ಜಿಗಳ ಸಂಖ್ಯೆಯ ಕುರಿತು ಅಂದು ಸಂಜೆ 5:30ರೊಳಗೆ ವರದಿ ಸಲ್ಲಿಸುವಂತೆಯೂ ಬಿಎಲ್‍ಒಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನದ ದಿನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ವ್ಯಾಪಕ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.






