ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ: ಉದ್ದೇಶ ಪೂರ್ವಕವಾಗಿ ಮತದಾರನ ಹೆಸರು ಕೈಬಿಟ್ಟರೆ ಬಿಎಲ್ಒಗಳ ವಿರುದ್ಧ ಎಫ್ಐಆರ್: ರಾಜ್ಯ ಮುಖ್ಯ ಚುನಾವಣಾಧಿಕಾರಿ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಷ್ಕರಣೆ(ಎಸ್ಐಆರ್)-2026 ಪ್ರಕ್ರಿಯೆ ವೇಳೆ ಉದ್ದೇಶ ಪೂರ್ವಕವಾಗಿ ಮತದಾರರ ಕುರಿತು ನಿರ್ಲಕ್ಷ್ಯ ಅಥವಾ ಹೆಸರನ್ನು ಕೈಬಿಡುವ ಚಟುವಟಿಕೆ ಕಂಡುಬಂದಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿಎಲ್ಒ) ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಾಕೀತು ಮಾಡಿದ್ದಾರೆ.
ಬುಧವಾರ ಇಲ್ಲಿನ ವಾರ್ತಾ ಸೌಧದ ಮಹಾತ್ಮಗಾಂಧಿ ಸಬಾಂಗಣದಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ಆಯೋಜಿಸಲಾಗಿದ್ದ ಮಾಧ್ಯಮ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು. ಅನರ್ಹ ಮತದಾರರು ಪಟ್ಟಿಯಲ್ಲಿ ಇರಬಾರದು ಎಂಬ ಉದೇಶದಿಂದ ಲೋಪದೋಷಗಳಿಲ್ಲದ ವಿನೂತನ ಸಮಗ್ರ ಮತದಾರರ ಪಟ್ಟಿಯನ್ನು ಸಿದ್ಧ ಪಡಿಸುವುದೇ “ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಷ್ಕರಣೆ(ಎಸ್ಐಆರ್)-2026” ಎಂದರು.
ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರನಿಂದ ಅವರದ್ದೇ ಸಹಿಯಡಿ ಸಮಗ್ರ ಮಾಹಿತಿಯನ್ನು ಪಡೆದು ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುವುದು.ಒಂದು ವೇಳೆ ಉದ್ದೇಶ ಪೂರಕವಾಗಿ ಅರ್ಹ ಮತದಾರರನ ಹೆಸರು ಕೈಬಿಟ್ಟರೆ ಅಥವಾ ನಿರ್ಲಕ್ಷ್ಯವಹಿಸಿದರೆ ಸಂಬಂಧಪಟ್ಟ ಬಿಎಲ್ಒ ವಿರುದ್ಧ ಕಾನೂನು ರೀತ್ಯಾ ಎಫ್ಐಆರ್ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಹೊಣೆ ಪ್ರತಿಯೊಬ್ಬ ಭಾರತೀಯನದ್ದಾಗಿದೆ.ಇದು ಕೇವಲ ಚುನಾವಣಾ ಆಯೋಗದ ಹೊಣೆಯಷ್ಟೇ ಅಲ್ಲ. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಬಿಎಲ್ಒ ಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರಿಗೆ ಎಣಿಕೆ ಫಾರ್ಮ್ (ಎನ್ಯುಮರೇಷನ್ ಫಾರ್ಮ್) ಜೊತೆಗೆ ಎಲ್ಲ ಮಾಹಿತಿಗಳನ್ನು ಮನೆ ಮನೆ ಭೇಟಿಯಲ್ಲಿ ಪಡೆಯಲಿದ್ದಾರೆ ಎಂದು ವಿವರಿಸಿದರು.
ಈ ಸಂಬಂಧ ಉದ್ಭವಿಸುವ ಸಮಸ್ಯೆಗಳು, ಪ್ರಶ್ನೆಗಳ ನಿವಾರಣೆಗೆ ಪಂಚಾಯಿತಿಗೊಂದು ಫೆಸಿಲಿಟೇಟಿಂಗ್ ಕೇಂದ್ರಗಳನ್ನು ನೀಡಲಾಗುವುದು. ಒಟ್ಟಿನಲ್ಲಿ ಸ್ವಚ್ಛ ಮತ್ತು ವಿನೂತನ ಮತದಾರರ ಪಟ್ಟಿ ತಯಾರಿಕೆ ಸದ್ಯ ರಾಜ್ಯ ಚುನಾವಣಾ ಆಯೋಗದ ಪ್ರಮುಖ ಕರ್ತವ್ಯ ಎಂದ ಅವರು, ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಗಳ ವಿಶ್ವಾಸರ್ಹತೆಯನ್ನು ಕಾಪಾಡಿಕೊಳ್ಳುವುದು ಮೂಲಭೂತ ಅಗತ್ಯ ಈ ನಿಟ್ಟಿನಲ್ಲಿ ಈಗಾಗಲೇ ನಿಗದಿಯಾದ ಮಾರ್ಗಸೂಚಿ ಮತ್ತು ವೇಳಾಪಟ್ಟಿಗನುಗುಣವಾಗಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯಲಿದೆ ಎಂದು ಅವರು ಉಲ್ಲೇಖಿಸಿದರು.
ಕಾರ್ಯಾಗಾರದಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಉಪ ಮುಖ್ಯ ಚುನಾವಣಾಧಿಕಾರಿ ವಂದನಾ, ಸಹಾಯಕ ಮುಖ್ಯ ಚುನಾವಣಾಧಿಕಾರಿ ಮಹೇಂದ್ರ ಸೇರಿದಂತೆ ಪ್ರಮುಖರಿದ್ದರು.
ಬೂತ್ ಏಜೆಂಟ್ನಲ್ಲಿ ಕಾಂಗ್ರೆಸ್ ಮೇಲುಗೈ..!
ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಏಜೆಂಟರು(ಬಿಎಲ್ಎ) ಪಾಲ್ಗೊಳ್ಳಲಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ 69,977 ಬಿಎಲ್ಎಗಳು ನೋಂದಾಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಕಾಂಗ್ರೆಸ್ ಪಕ್ಷದಿಂದ 36,213, ಬಿಜೆಪಿ 31,115, ಜೆಡಿಎಸ್ನಿಂದ 2,316 ಬಿಎಲ್ಎಗಳು ಪಟ್ಟಿಯಲ್ಲಿದ್ದಾರೆ ಎಂದು ಅನ್ಬುಕುಮಾರ್ ಹೇಳಿದ್ದಾರೆ.






