KPSC ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚನೆ; ತನಿಖಾ ವರದಿ ಸಲ್ಲಿಸಲು 100 ದಿನ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿರುವ ಪಶು ವೈದ್ಯಾಧಿಕಾರಿ ಹಾಗೂ ಇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ಹೊಸದಾಗಿ ತನಿಖೆ ನಡೆಸಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.
ಇದೇ ವೇಳೆ, 100 ದಿನಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಎಸ್‌ಐಟಿಗೆ ಗಡುವು ವಿಧಿಸಿರುವ ಹೈಕೋರ್ಟ್, ಪ್ರತಿ 30 ದಿನಗಳಿಗೊಮ್ಮೆ ತನಿಖಾ ಪ್ರಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಎಸ್‌ಐಟಿಗೆ ನಿರ್ದೇಶಿಸಿದೆ.
ಕೆಪಿಎಸ್‌ಸಿ ಅಕ್ರಮ ನೇಮಕಾತಿಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಕುರಿತಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕೆಪಿಎಸ್‌ಸಿ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕೆಂಬ ಅರ್ಜಿದಾರರ ಮನವಿ ಹಾಗೂ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ನಡೆಸಲು ಸಮರ್ಥವಾಗಿರುವುದರಿಂದ ಅಲ್ಲಿಯೇ ತನಿಖೆ ಮುಂದುವರಿಸಲು ಅನುಮತಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.
ಅಲೋಕ್ ಕುಮಾರ್ ನೇತೃತ್ವದಲ್ಲಿ ತಂಡ ರಚನೆ:
ಎಡಿಜಿಪಿ ಅಲೋಕ್ ಕುಮಾರ್ (ಎಸ್‌ಐಟಿ ಮುಖ್ಯಸ್ಥ), ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ನಿರ್ದೇಶಕಿಯಾಗಿರುವ ಐಜಿಪಿ ಡಾ. ದಿವ್ಯಾ ಗೋಪಿನಾಥ್, ಉಪ ಪೊಲೀಸ್ ಆಯುಕ್ತರಾದ ಅನೂಪ್ ಶೆಟ್ಟಿ ಮತ್ತು ಶಮಾ ಮಿಶ್ರಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರನ್ನೊಳಗೊಂಡ ಐವರು ಸದಸ್ಯರ ಎಸ್‌ಐಟಿಗೆ ಸಿಐಡಿಯು ಇದುವರೆಗೆ ನಡೆಸಿರುವ ತನಿಖಾ ವರದಿ ಮತ್ತು ಸಂಗ್ರಹಿಸಿರುವ ಎಲ್ಲ ದಾಖಲೆಗಳನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಎರಡೂ ಪ್ರಕರಣಗಳ ತನಿಖೆ ಮತ್ತು ಇವುಗಳ ತನಿಖೆಯ ಸಂದರ್ಭದಲ್ಲಿ ಹೊರಹೊಮ್ಮುವ ಎಲ್ಲ ವಿಚಾರಗಳ ಕುರಿತು ಎಸ್‌ಐಟಿ ವಿಸ್ತೃತ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದ್ದು, ಇ.ಡಿ ಮತ್ತು ಎಸ್‌ಐಟಿಯು ಪರಸ್ಪರ ಸಹಕಾರ ಮತ್ತು ನೆರವಿನ ಮೂಲಕ ತನಿಖೆ ನಡೆಸಬೇಕು ಎಂದು ಎಸ್‌ಐಟಿಗೆ ನಿರ್ದೇಶಿಸಿರುವ ಹೈಕೋರ್ಟ್, ಸಿಐಡಿ ಮತ್ತು ವ್ಯಾಪ್ತಿ ಹೊಂದಿರುವ ಪೊಲೀಸರು ಎಸ್‌ಐಟಿ ಕೋರುವ ಎಲ್ಲ ನೆರವು ಒದಗಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳು, ತನಿಖಾ ಸಂಸ್ಥೆಗಳು, ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಸಂಬಂಧಿತ ಅಧಿಕಾರಿಗಳು ಸಂಪೂರ್ಣ ಸಹಕಾರವನ್ನು ಎಸ್‌ಐಟಿಗೆ ನೀಡಬೇಕು. ಎಸ್‌ಐಟಿಯು ತನಗೆ ಅಗತ್ಯವಾದ ಎಫ್‌ಎಸ್‌ಎಲ್ ಸೌಲಭ್ಯ, ಸೈಬರ್, ಆರ್ಥಿಕ, ತಾಂತ್ರಿಕ ಮತ್ತು ಇತರ ವಿಶೇಷ ನೆರವು ಪಡೆಯಲು ಸ್ವತಂತ್ರವಾಗಿದೆ ಎಂದು ಆದೇಶಿಸಿದೆ.
ಪ್ರಕರಣದ ಅರ್ಹತೆಯ ಮೇಲೆ ಈ ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರ ಮತ್ತು ಪಾರದರ್ಶಕವಾಗಿ ಎಸ್‌ಐಟಿ ತನಿಖೆ ನಡೆಸಬೇಕು. ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ತನಿಖೆಯಲ್ಲಿ ಮೂಗು ತೂರಿಸಬಾರದು ಮತ್ತು ಪ್ರಭಾವಿಸಲು ಯತ್ನಿಸಬಾರದು. ನ್ಯಾಯಾಲಯ ರಚಿಸಿರುವ ಎಸ್‌ಐಟಿಯನ್ನು ಪೊಲೀಸ್ ಠಾಣೆಯನ್ನಾಗಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಆದೇಶದಲ್ಲಿನ ಅಭಿಪ್ರಾಯಗಳು ಅಗತ್ಯ, ಸ್ವಭಾವ ಮತ್ತು ತನಿಖಾ ಸಂಸ್ಥೆಗೆ ಸೀಮಿತವಾಗಿದ್ದು, ಇದು ಯಾವುದೇ ವ್ಯಕ್ತಿಯು ಅಪರಾಧಿ, ಮುಗ್ಧ ಅಥವಾ ಅಪರಾಧದ ಹೊಣೆಗಾರಿಕೆ ಎಂದು ಭಾವಿಸಕೂಡರು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣ ರದ್ದು ಕೋರಿ ಕೆಲ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ತನಿಖೆ ನಡೆಸಿ ಎಸ್‌ಐಟಿ ಸಲ್ಲಿಸಲಿರುವ ವರದಿ ಆಧರಿಸಿ ಪರಿಗಣಿಸಲಾಗುವುದು. ಆದ್ದರಿಂದ, ಈ ಅರ್ಜಿಗಳು ಬಾಕಿ ಉಳಿಯಲಿವೆ ಎಂದು ನಿರ್ದೇಶಿಸಿರುವ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು 2027ರ ಜನವರಿ 5ಕ್ಕೆ ಮುಂದೂಡಿದೆ.






