ಎಫ್ಎಸ್ಎಲ್ ವರದಿ ಬರುವವರೆಗೆ ಶೋಧಕಾರ್ಯ ಸ್ಥಗಿತ: ಧರ್ಮಸ್ಥಳ ಪ್ರಕರಣ ಕುರಿತು ಗೃಹಸಚಿವ ಪರಮೇಶ್ವರ್ ಮಾಹಿತಿ

ಬೆಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ವಿಪಕ್ಷಗಳ ಆರೋಪ ಸಂಬಂಧ ಸೋಮವಾರ ಸದನದಲ್ಲಿ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ.ಜಿ. ಪರಮೇಶ್ವರ್, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಇದುವರೆಗೆ ಒಂದು ಅಸ್ಥಿಪಂಜರ, ಮತ್ತೊಂದು ಕಡೆ ಮೂಳೆಗಳು ಸಿಕ್ಕಿವೆ. ಇದರ ಎಫ್‌ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ವರದಿ ಲಭ್ಯವಾಗುವವರೆಗೆ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದರು.
ಇಷ್ಟರವರೆಗೆ ನಡೆದಿದ್ದು ಕೇವಲ ಉತ್ಖನನ ಕಾರ್ಯ ಮಾತ್ರ, ಇನ್ನೂ ತನಿಖೆ ಆರಂಭವಾಗಿಲ್ಲ. ದೂರುದಾರ ಮೊದಲು ತಂದ ತಲೆಬುರುಡೆಯನ್ನೂ ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರ ಮುಂದಿನ ತನಿಖೆ ನಡೆಯಲಿದೆ. ಸ್ಯಾಂಪಲ್ ಅನಾಲಿಸಿಸ್, ಡಿಎನ್‌ಎ ಸೇರಿ ಹಲವು ವಿಶ್ಲೇಷಣೆ ಆಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಣ್ಣಿನ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ರಾಸಾಯನಿಕ ಅಂಶಗಳಲ್ಲಿ ಮನುಷ್ಯನ ಮೂಳೆಗಳು ಕರಗಿರುವ ಬಗ್ಗೆ ವರದಿ ಇದೆಯೇ ಎಂಬುದನ್ನು ಕಾಯಬೇಕಿದೆ. ಅಲ್ಲಿ ಏನೋ ಆಗಿದೆ ಅಂತಾನೂ ಹೇಳಕ್ಕಾಗಲ್ಲ, ಆಗೇ ಇಲ್ಲ ಅಂತಾನೂ ಹೇಳಕ್ಕಾಗಲ್ಲ. ತನಿಖೆ ಮುಗಿಯಲಿ, ಸತ್ಯಾಂಶ ಹೊರಬರಲಿ, ಇದೆಲ್ಲ ಆರೋಪ ಸುಳ್ಳು ಅಂತಾದ್ರೆ ಧರ್ಮಸ್ಥಳದ ಮೇಲಿನ ನಂಬಿಕೆ, ಗೌರವ ಇನ್ನಷ್ಟು ಹೆಚ್ಚುತ್ತದೆ. ಇಲ್ಲ, ಅಲ್ಲಿ ಏನೋ ನಡೆದಿದ್ದು ಹೌದು ಎಂದಾದರೆ ಸತ್ಯ ಹೊರಬರುತ್ತೆ, ಸಂತ್ರಸ್ತರಿಗೆ ನ್ಯಾಯ ಸಿಗುತ್ತೆ ಎಂದು ಅವರು ಹೇಳಿದರು.
ದೂರುದಾರ ಧರ್ಮಸ್ಥಳದ ಎಲ್ಲಾ ಕಡೆ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ. ಮುಂದೆ ಅಗೆಯಬೇಕೊ ಬೇಡವೋ ಎಂದು ಎಸ್‌ಐಟಿ ತಿರ್ಮಾನ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ದೂರುದಾರನನ್ನು ಏಕೆ ಬಂಧಿಸಿಲ್ಲ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದರು. ಕೇಂದ್ರ ಸರ್ಕಾರ ರಚಿಸಿರುವ ವಿಟ್ನೆಸ್ ಪ್ರೊಟೆಕ್ಷನ್ ಕಾಯ್ದೆ ಇದೆ. ದೂರುದಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊರೆ ಹೋಗಿದ್ದ. ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮಿಟಿ ದೂರುದಾರ ಮತ್ತು ಆತನ ಕುಟುಂಬಕ್ಕೆ ಭದ್ರತೆ ನೀಡುವಂತೆ ಆದೇಶ ನೀಡಿತ್ತು. ಹೀಗಾಗಿ ಬಂಧಿಸಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ನಾವು ಇದನ್ನು ನ್ಯಾಯಕ್ಕೆ, ನೆಲದ ಕಾನೂನಿಗೆ ಬಿಡೋಣ. ಸತ್ಯ ಹೊರಬರಲಿ, ಅದನ್ನು ನಾವು, ನೀವೂ, ಧರ್ಮಸ್ಥಳದವರು, ಜನರು ಎಲ್ಲರೂ ಸ್ವೀಕರಿಸೋಣ. ಆವರೆಗೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಗೃಹ ಸಚಿವ ಹೇಳಿದ್ದಾರೆ.
ತನಿಖೆ ನಡೆಯುತ್ತಿರುವಾಗ ನಾವು ಏನೂ ಹೇಳಕ್ಕಾಗಲ್ಲ. ಮಧ್ಯಂತರ ವರದಿಯೂ ನಮಗೆ ಬಂದಿಲ್ಲ , ಹಾಗಾಗಿ ಈಗ ಏನನ್ನೂ ಹೇಳುವಂತಿಲ್ಲ. ಆದಷ್ಟು ಸಮಗ್ರವಾಗಿ, ಆದಷ್ಟು ಶೀಘ್ರವಾಗಿ ತನಿಖೆ ಮಾಡಿ ಎಂದಷ್ಟೇ ಹೇಳಬಹುದೇ ವಿನಃ ಇಷ್ಟೇ ದಿನಗಳಲ್ಲಿ, ಹೀಗೇ ಮುಗಿಸಿ ಎಂದು ನಾವು ಹೇಳಕ್ಕಾಗಲ್ಲ. ವಿರೋಧ ಪಕ್ಷದವರು ಈ ವಿಷಯದಲ್ಲಿ ಸಹಕರಿಸಬೇಕು. ಸರಕಾರ ಯಾರ ದೂಷಣೆಯನ್ನೂ ಮಾಡಲ್ಲ, ರಕ್ಷಣೆಯನ್ನೂ ಮಾಡಲ್ಲ, ನಮಗೆ ಅದರ ಅಗತ್ಯವೂ ಇಲ್ಲ. ನಾವು ಪಕ್ಷಾತೀತವಾಗಿ ನ್ಯಾಯಯುತವಾಗಿ ತನಿಖೆ ನಡೆದು ಸತ್ಯ ಹೊರಬರಲಿ ಎಂದಷ್ಟೇ ಬಯಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.







