‘ಸ್ಮಾರ್ಟ್ ಮೀಟರ್’ ಹೆಸರಿನಲ್ಲಿ ಹಗಲು ದರೋಡೆ : ಬಿಜೆಪಿ ಆರೋಪ

ಬೆಂಗಳೂರು : ರಾಜ್ಯ ಸರಕಾರ ‘ಸ್ಮಾರ್ಟ್ ಮೀಟರ್’ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದೆ. ಮಾತ್ರವಲ್ಲದೆ, ಗ್ರಾಹಕರಿಗೆ ಅನ್ಯಾಯ ವೆಸಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ಟೀಕಿಸಿದ್ದಾರೆ.
ಬುಧವಾರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗದೊಂದಿಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್ ಅಕ್ರಮ ಸಂಬಂಧ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದೇವೆ. ಈ ಹಗರಣದಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಸಾವಿರಾರು ಕೋಟಿ ರೂ.ಲೂಟಿ ನಡೆಯುತ್ತಿದೆ. ಇಂಧನ ಇಲಾಖೆ ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿ ಆಗಿರುವುದಾಗಿ ರಾಜ್ಯಪಾಲರ ಗಮನ ಸೆಳೆದಿದ್ದೇವೆ ಎಂದು ಹೇಳಿದರು.
ಈ ಅಕ್ರಮ ಕುರಿತು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಇದುವರೆಗೂ ಎಫ್‍ಐಆರ್ ದಾಖಲಾಗಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ಮತ್ತೊಮ್ಮೆ ನೆನಪೋಲೆ ಕೊಡಲಾಗಿದೆ. ಅಧಿಕಾರ ದುರ್ಬಳಕೆ ಮಾಡಿದ ಇಂಧನ ಸಚಿವರು, ಇತರ ಅಧಿಕಾರಿಗಳು, ಗುತ್ತಿಗೆ ಕೊಟ್ಟು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ, ಹಗಲು ದರೋಡೆ ಮಾಡಿದ ಸ್ಮಾರ್ಟ್ ಮೀಟರ್ ಹಗರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.





