ಹಾವು, ನಾಯಿ ಕಡಿತ ಪ್ರಕರಣ | ಖಾಸಗಿ ಆಸ್ಪತ್ರೆಗಳು ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡಲು ಆದೇಶ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಖಾಸಗಿ ಆಸ್ಪತ್ರೆಗಳು ಹಾವು ಕಡಿತ, ನಾಯಿ ಸೇರಿ ಪ್ರಾಣಿ ಕಡಿತದ ತುರ್ತು ಸಂದರ್ಭಗಳಲ್ಲಿ ಯಾವುದೇ ಮುಂಗಡ ಪಾವತಿಗೆ ಒತ್ತಾಯಿಸದೆ ಸಂತ್ರಸ್ಥರಿಗೆ ಚಿಕಿತ್ಸೆಯನ್ನು ನೀಡಬೇಕು ಎಂದು ರಾಜ್ಯ ಸರಕಾರವು ಶನಿವಾರದಂದು ಆದೇಶ ಹೊರಡಿಸಿದೆ.
ಇಂತಹ ತುರ್ತು ಪರಿಸ್ಥಿತಿಯಲ್ಲಿ, ಖಾಸಗಿ ವೈದ್ಯಕೀಯ ಸಂಸ್ಥೆಯು ಅಗತ್ಯ ಪ್ರಥಮ ಚಿಕಿತ್ಸೆಯನ್ನು ನೀಡಿ, ಜೀವ ಉಳಿಸಬೇಕು. ತುರ್ತು ಸಂದರ್ಭಗಳಲ್ಲಿ, ಮುಂಗಡ ಪಾವತಿಗೆ ಒತ್ತಾಯಿಸದೆ ಚಿಕಿತ್ಸೆ ನೀಡಿದ್ದಲ್ಲಿ, ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರವು ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಮೂಲಕ ಪಾವತಿಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹಾವು ಕಡಿತ, ನಾಯಿ ಸೇರಿ ಪ್ರಾಣಿ ಕಡಿತದ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ದ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗುತ್ತದೆ. ಹಾಗೆಯೇ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106ರ ಪ್ರಕಾರ ಕಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಂಡು, ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಜೊತೆಗೆ ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.





