"ನನ್ನಿಂದ ತಪ್ಪಾಗಿದೆ": ಶಾಲಿನಿ ರಜನೀಶ್ಗೆ ಕ್ಷಮೆ ಕೋರಿದ ಸ್ನೇಹಮಯಿ ಕೃಷ್ಣ

ಶಾಲಿನಿ ರಜನೀಶ್ / ಸ್ನೇಹಮಯಿ ಕೃಷ್ಣ
ಬೆಂಗಳೂರು: ನಕಲಿ ಆಡಿಯೋ ಹಾಗೂ ದಾಖಲಾತಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದ ಆರೋಪ ಪ್ರಕರಣದಡಿ ಸಿಸಿಬಿ ವಶದಲ್ಲಿದ್ದ ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಿಡುಗಡೆಗೊಂಡಿದ್ದು, ಈ ವೇಳೆ "ನನ್ನಿಂದ ತಪ್ಪಾಗಿದೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಲ್ಲಿ ಕ್ಷಮೆ ಕೋರುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.
ವಿಚಾರಣೆ ಮುಗಿಸಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಕೆಎಎಸ್ ಅಧಿಕಾರಿ ನಟೇಶ್ ಅವರು ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ನನ್ನನ್ನು ವಿಚಾರಣೆ ನಡೆಸಿದರು. ಆದರೆ, ಆಡಿಯೊದಲ್ಲಿ ನಟೇಶ್ ಧ್ವನಿ ಇದೆ. ಆದರೆ ಮುಂಭಡ್ತಿ ವಿಚಾರ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಲಂಚ ಪಡೆದಿದ್ದಾರೆ ಎಂದು ಮೈಸೂರು ಮೂಲದ ವಿನೋದ್ ನನಗೆ ಸುಳ್ಳು ಮಾಹಿತಿ ನೀಡಿದ್ದ. ಹೀಗಾಗಿ ಮುಖ್ಯ ಕಾರ್ಯದರ್ಶಿ ಅವರಿಗೆ ಕ್ಷಮೆ ಕೇಳುವೆ ಎಂದರು.
ಅಧಿಕಾರಿ ನಟೇಶ್ ಹಾಗೂ ವಿನೋದ್ ಮಧ್ಯೆ ಹಣಕಾಸಿನ ವಿಚಾರಕ್ಕೆ ಮನಸ್ತಾಪವಿತ್ತು. ನನ್ನನ್ನು ಸಂಪರ್ಕಿಸಿ ಶಾಲಿನಿ ರಜನೀಶ್ ಬಗ್ಗೆ ವಿನೋದ್ ಸುಳ್ಳು ಮಾಹಿತಿ ನೀಡಿದ್ದ. ಈ ಮೂಲಕ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿಯೇ ಬಂಧನದಲ್ಲಿರುವ ವಿನೋದ್ ನೀಡಿದ ದಾಖಲಾತಿ ಆಧರಿಸಿ ಶಾಲಿನಿ ರಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದೆ ಎಂದು ಅವರು ಮಾಹಿತಿ ನೀಡಿದರು.
ಏನಿದು ಪ್ರಕರಣ?:
ಮುಡಾ ಮಾಜಿ ಆಯುಕ್ತ ಹಾಗೂ ಹಾಲಿ ಕರ್ನಾಟಕ ಖಾದಿ ಗ್ರಾಮದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಿ.ಬಿ.ನಟೇಶ್ ಅವರು ನಕಲಿ ದಾಖಲೆ ಹಾಗೂ ಆಡಿಯೊ ಬಳಸಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿರುವುದಾಗಿ ಆರೋಪಿಸಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಫೆ.18ರಂದು ದೂರು ನೀಡಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ಮೈಸೂರು ಮೂಲದ ವಿನೋದ್ ಎಂಬವನನ್ನು ಬಂಧಿಸಿದ್ದಾರೆ.
ನಟೇಶ್ ಹಾಗೂ ಮೈಸೂರು ಮೂಲದ ವಿನೋದ್ ಎಂಬಾತನ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ನಟೇಶ್ ಅವರೊಂದಿಗಿನ ವೈಷ್ಯಮದ ಲಾಭ ಪಡೆಯಲು ಸ್ನೇಹಮಯಿ ಕೃಷ್ಣರನ್ನು ವಿನೋದ್ ಬಳಸಿಕೊಂಡಿದ್ದ. ಮುಂಭಡ್ತಿಗಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿರುವುದಾಗಿ ತಪ್ಪು ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಸ್ನೇಹಮಯಿ ಕೃಷ್ಣ, ಶಾಲಿನಿ ರಜನೀಶ್ ಮೇಲೆ ಲಂಚದ ಆರೋಪ ಹೊರಿಸಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಪ್ರಕರಣ ಸಂಬಂಧ ವಶದಲ್ಲಿದ್ದ ಸ್ನೇಹಮಯಿ ಕೃಷ್ಣರನ್ನು ಶನಿವಾರ ಬಿಟ್ಟು ಕಳುಹಿಸಲಾಗಿದ್ದು, ಫೆ.24ರಂದು ವಿಚಾರಣೆ ಬರುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.






