ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಕುರಿತು ಸುಳ್ಳು ಮಾಹಿತಿ ಹಂಚಿಕೊಂಡರೆ ಕ್ರಿಮಿನಲ್ ಪ್ರಕರಣ : ಹಿಂದುಳಿದ ವರ್ಗಗಳ ಆಯೋಗ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ವರದಿಯ ದತ್ತಾಂಶಗಳ ಬಗ್ಗೆ ಸುಳ್ಳು ಮತ್ತು ಅನಧಿಕೃತ ಮಾಹಿತಿಯನ್ನು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.
ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಆಯೋಗ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ಸಂಗ್ರಹಿಸಿದ ದತ್ತಾಂಶಗಳ ಆಧಾರದ ಮೇಲೆ ಸಿದ್ಧಪಡಿಸಿದ ವರದಿಯನ್ನು ಮೇ 27ರಂದು ಸರಕಾರಕ್ಕೆ ಸಲ್ಲಿಸಿದೆ. ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ನ್ಯಾಯಾಲಯದ ನಿರ್ದೇಶನದ ಮೇರೆಗೆ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಸುರಕ್ಷಿತವಾಗಿ ಭದ್ರ ವ್ಯವಸ್ಥೆಯಲ್ಲಿ ಇಡಲು ಆಯೋಗವು ಸರಕಾರವನ್ನು ಕೋರಿದ್ದು, ಅದರಂತೆ ಕ್ರಮವಹಿಸಲಾಗಿದೆ. ಆದಾಗ್ಯೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಸಮೀಕ್ಷೆ ಹಾಗೂ ಆಯೋಗವು ಸರಕಾರಕ್ಕೆ ನೀಡಿರುವ ವರದಿಯಲ್ಲಿ ಇರುವ ಯಾವುದೇ ಮಾಹಿತಿಗಳನ್ನು ಆಯೋಗವು ಬಹಿರಂಗಪಡಿಸಿರುವುದಿಲ್ಲ. ಕೇವಲ ಊಹಾಪೋಹಗಳ ಆಧಾರದಲ್ಲಿ ಕೆಲವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಇದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದೆ.






