ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು : ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲ್ಪಟ್ಟ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025’ಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸೋಮವಾರದಂದು ರಾಜ್ಯ ಸರಕಾರವು ರಾಜ್ಯಪತ್ರ ಹೊರಡಿಸಿದೆ.
ಈ ಕಾನೂನಿನ ಅನ್ವಯ ಸಾಮಾಜಿಕ ಬಹಿಷ್ಕಾರ ವಿಧಿಸುವುದಕ್ಕಾಗಿ ಸಭೆ ಸೇರುವುದು ನಿಷೇಧವಾಗಿದೆ. ಒಂದು ವೇಳೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸುವ ವಿಷಯದ ಮೇಲೆ ಸಂಘಟಿಸಿರುವ ಸಭೆಯಲ್ಲಿ ಭಾಗವಹಿಸಿರುವ ಪ್ರತಿ ಸದಸ್ಯನು ಒಂದು ಲಕ್ಷ ರೂಪಾಯಿಗಳಿಗೆ ದಂಡವನ್ನು ಪಾವತಿ ಮಾಡಬೇಕು. ಅಲ್ಲದೆ, ಈ ಅಪರಾಧ ಮಾಡಲು ನೆರವು ಅಥವಾ ಪ್ರೇರಣೆ ನೀಡಿದ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ.ಗಳ ದಂಡ ಅಥವಾ ಇವೆರಡನ್ನು ವಿಧಿಸಬಹುದಾಗಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಜೀವಾಂತವಾಗಿದೆ. ಈ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಇರುವ ಕಾನೂನುಗಳು ಪರಿಣಾಮಕಾರಿಯಲ್ಲ ಎಂದು ಸಾಬೀತಾಗಿದೆ. ಹೀಗಾಗಿ ಕಾನೂನನನ್ನು ತರಲಾಗಿದೆ ಎಂದು ಸರಕಾರವು ರಾಜ್ಯಪತ್ರದಲ್ಲಿ ಹೇಳಿದೆ.
ನೈತಿಕತೆ, ಸಾಮಾಜಿಕ ಸ್ವೀಕಾರ, ರಾಜಕೀಯ ಒಲವು, ಲಿಂಗತ್ವ ಅಥವಾ ಯಾವುದೇ ಇತರ ಆಧಾರದ ಮೇಲೆ ಸಮುದಾಯದ ಸದಸ್ಯರ ನಡುವೆ ತಾರತಮ್ಯವನ್ನು ಉಂಟುಮಾಡುವುದು, ಸಮಾಜದಿಂದ ದೂರವಿರಿಸುವುದು ಅಥವಾ ತಿರಸ್ಕರಿಸುವುದು ಅಥವಾ ಸಾಮಾಜಿಕ ಅಥವಾ ವ್ಯಾವಹಾರಿಕ ಬಂಧಗಳನ್ನು ಕಡಿಯುವುದು ಸಾಮಾಜಿಕ ಬಹಿಷ್ಕಾರವಾಗಿರುತ್ತದೆ.
ಸಾಮಾಜಿಕ ಬಹಿಷ್ಕಾರದ ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5), 61(1), 61(2), 190, 196, 308(1) ರಿಂದ (6) ಮತ್ತು 62ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು. ದೂರನ್ನು ಸ್ವೀಕರಿಸಿದ ಮೇಲೆ, ಇನ್ಸ್ ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಯು ಸ್ವಪ್ರೇರಿತ ಕ್ರಮವನ್ನು ಕೈಗೊಳ್ಳಬಹುದು ಎಂದು ಈ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತನಿಗೆ ಪರಿಹಾರ: ನ್ಯಾಯಾಲಯವು, ತೀರ್ಪನ್ನು ಹೊರಡಿಸುವಾಗ, ವಸೂಲಾದ ದಂಡದ ಪೂರ್ಣ ಅಥವಾ ಭಾಗವನ್ನು ಸಂತ್ರಸ್ತ ಅಥವಾ ಆತನ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಆದೇಶಿಸಬಹುದು ಎಂದು ತಿಳಿಸಿದೆ.
ಕಾಯ್ದೆಯಲ್ಲಿ ಉಲ್ಲೇಖಿಸಲಾದ ಸಾಮಾಜಿಕ ಬಹಿಷ್ಕಾರದ ವ್ಯಾಖ್ಯಾನ :
1.ಇನ್ನೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಲು, ಬಾಡಿಗೆಗಾಗಿ ಕೆಲಸ ನಿರ್ವಹಿಸಲು ಅಥವಾ ವ್ಯಾಪಾರ ಮಾಡಲು ಮತ್ತು ಸೇವೆ ನಿರಾಕರಿಸುವುದು ಸಾಮಾಜಿಕ ಬಹಿಷ್ಕಾರವಾಗಿದೆ.
2.ಯಾವುದೇ ಸಾಮಾಜಿಕ, ಧಾರ್ಮಿಕ ಅಥವಾ ಸಾಮುದಾಯಿಕ ಕಾರ್ಯಕ್ರಮಗಳು, ಸಮಾರಂಭ, ಸಮಾವೇಶ, ಸಭೆ ಅಥವಾ ಮೆರವಣಿಗೆಗಳಲ್ಲಿ ಪಾಲ್ಗೊಳ್ಳದಂತೆ ತಡೆಯುವುದು.
3.ಸಹಜವಾಗಿ ನೆರವೇರಿಸುವ ಮದುವೆ, ಶವಸಂಸ್ಕಾರ ಅಥವಾ ಇತರ ಧಾರ್ಮಿಕ ಸಮಾರಂಭಗಳು ಮತ್ತು ಪದ್ಧತಿಗಳನ್ನು ನಿರ್ವಹಿಸಲು ನಿರಾಕರಿಸುವುದು.
4.ಧರ್ಮಾದಾಯ ದತ್ತಿ, ಧಾರ್ಮಿಕ ಅಥವಾ ಸಾರ್ವಜನಿಕ ಸ್ಥಳಕ್ಕೆ ಪ್ರವೇಶಿಸುವುದನ್ನು ತಡೆಯುವುದು.
5.ಯಾವುದೇ ಶಾಲೆ, ಶೈಕ್ಷಣಿಕ ಸಂಸ್ಥೆ, ವೈದ್ಯಕೀಯ ಸಂಸ್ಥೆ, ಸಮುದಾಯ ಸಭಾಂಗಣ, ಕ್ಲಬ್ ಹಾಲ್, ಸ್ಮಶಾನ, ಸಮಾಧಿ ಸ್ಥಳ ಅಥವಾ ಆತನ ಸಮುದಾಯವು ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಯಾವುದೇ ಇತರ ಸ್ಥಳ ಅಥವಾ ಯಾವುದೇ ಇತರ ಸಾರ್ವಜನಿಕ ಸ್ಥಳದ ಸೌಲಭ್ಯ ಒದಗಿಸುವುದನ್ನು ಅಥವಾ ಬಳಸುವುದನ್ನು ತಡೆಯುವುದು.







