ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಮೊದಲ ದಿನದ ಸಮೀಕ್ಷೆ

ಕಲಬುರಗಿಯಲ್ಲಿ ಸಮೀಕ್ಷೆಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಚಾಲನೆ
ಬೆಂಗಳೂರು, ಸೆ.22 : ಪ್ರಬಲ ಜಾತಿಗಳ ವಿರೋಧಕ್ಕೆ ಮಣಿಯದೇ ರಾಜ್ಯ ಸರಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೋಮವಾರದಿಂದ ಆರಂಭಿಸಿದ್ದು, ಮೊದಲನೆ ದಿನ ರಾಜ್ಯದ ಬಹು ಭಾಗಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ, ಸುಸೂತ್ರವಾಗಿ ಸಮೀಕ್ಷೆಯು ನಡೆದಿದೆ. ಆದರೆ ಕೆಲವು ಭಾಗಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದೆ.
ಗಣತಿಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳಿಗೆ ಬ್ಯಾಗ್, ಗಣತಿ ಕಿಟ್, ಐಡಿ ಕಾರ್ಡ್, ಬಿಸಿಲು, ಮಳೆಗೆ ಆಸರೆಯಾಗಿ ಕ್ಯಾಪ್ ವಿತರಿಸಲಾಯಿತು. ನಂತರ ಗಣತಿದಾರರು ಮಾಹಿತಿಯನ್ನು ಕಲೆ ಹಾಕಲು ತೆರಳಿದರು. ಸಮೀಕ್ಷೆಯ ನಡೆಸುವ ತಂತ್ರಾಂಶದಲ್ಲಿ ಕಾಲನಿಗಳು, ಅಪಾರ್ಟ್ಮೆಂಟ್ಗಳು ಹಾಗೂ ವಾಸಸ್ಥಳಗಳನ್ನು ಗುರುತಿಸಲಾಗಿದ್ದು, ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ, ಸಮೀಕ್ಷಯನ್ನು ಪೂರ್ಣಗೊಳಿಸಿದ ಮನೆಗಳಿಗೆ ಯುಎಚ್ಐಡಿ ಸ್ಟಿಕ್ಕರ್ಗಳನ್ನು ಅಂಟಿಸಿದರು.
ಸಮೀಕ್ಷೆಯು 60 ಪ್ರಶ್ನಾವಳಿಗಳನ್ನು ಹೊಂದಿದ್ದು, ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಲು, ಯೋಜನೆಗಳನ್ನು ರೂಪಿಸಲು ಸಮೀಕ್ಷೆಯು ಸಹಕರಿಯಾಗಲಿದೆ. ಹೀಗಾಗಿ ಸಾರ್ವಜನಿಕರು ಗಣತಿದಾರರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಗಣತಿದಾರರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಸಮೀಕ್ಷೆಯ ಮುನ್ನ ಬೆಸ್ಕಾಂ ವಿದ್ಯುತ್ ಮೀಟರ್ ರೀಡರ್ಗಳ ಆರ್.ಆರ್.ನಂ ಮೂಲಕ ಮನೆಮನೆಗಳಿಗೆ ಭೇಟಿ ನೀಡಿ ಜಿಯೋ ಟ್ಯಾಗಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಮನೆಗಳ ಪಟ್ಟಿಯ ಮಾಹಿತಿಯನ್ನು ಇಡಿಸಿಎಸ್ ಸರ್ವರ್ ಗಳಲ್ಲಿ ಅಫ್ಲೋಡ್ ಮಾಡಲಾಗಿದೆ. ಹೀಗಾಗಿ ಸಮೀಕ್ಷೆಯು ಸುಸೂತ್ರವಾಗಿ ನಡೆಯಿತು.
ರಾಜ್ಯದ ಕೆಲ ಭಾಗಗಳಲ್ಲಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸಮೀಕ್ಷೆಯ ಕಿಟ್ ಸಿಕ್ಕಿಲ್ಲ. ಸಮೀಕ್ಷೆಯನ್ನು ನಡೆಸಲು ತರಬೇತಿಯೂ ನೀಡಿಲ್ಲ. ಸಮೀಕ್ಷೆಯನ್ನು ನಡೆಸಲು ಸಿದ್ಧಪಡಿಸಿರುವ ಮೊಬೈಲ್ ತಂತ್ರಾಂಶವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲಿ ಹೋಗಿ ಸರ್ವೆ ಮಾಡಬೇಕು ಎಂಬ ಬಗ್ಗೆ ಮಾಹಿತಿಯನ್ನು ಕೊಟ್ಟಿಲ್ಲ ಎಂದು ಕೆಲ ಶಿಕ್ಷಕರು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸಮೀಕ್ಷೆಯ ಕಿಟ್ ಪಡೆಯಲು ಶಿಕ್ಷಕರು ಬಂದಿದ್ದರು, ಆದರೆ ಸಮಯಕ್ಕೆ ಸರಿಯಾಗಿ ಸಮೀಕ್ಷೆಯ ಕಿಟ್ ಸಿಕ್ಕಿಲ್ಲ. ಈ ವೇಳೆ ಬಿಇಒ ಕಚೇರಿಗೆ ಆಗಮಿಸಿದ ಸಚಿವ ಮಧು ಬಂಗಾರಪ್ಪ, ಗೊಂದಲ ನಿವಾರಿಸಿ ಜಾತಿಗಣತಿಗೆ ಚಾಲನೆ ನೀಡಿದರು. ನಂತರ ಗಣತಿದಾರರಿಗೆ ಸಮೀಕ್ಷೆ ಕಿಟ್ ವಿತರಿಸಿದರು.
ಬಳ್ಳಾರಿಯಲ್ಲೂ ಸರಕಾರದ ಮೊಬೈಲ್ ತಂತ್ರಾಂಶ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಅಧಿಕೃತ ಚಾಲನೆಗಾಗಿ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳು ಕಾದು ಕುಳಿತಿದ್ದ ಘಟನೆ ಕಂಡು ಬಂದಿತು. ಹಾವೇರಿಯಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಮನೆ ಮೇಲೆ ಅಂಟಿಸಿರುವ ಯುಹೆಚ್ಐಡಿ ನಂಬರ್ ಅನ್ನ ಮೊಬೈಲ್ ತಂತ್ರಾಂಶದಲ್ಲಿ ಹಾಕಿದಾಗ ಅಡಚಣೆ ಉಂಟಾಗಿ ಶಿಕ್ಷಕರು ಪರದಾಡಿದರು.
ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಸಮೀಕ್ಷೆಗೆ ಚಾಲನೆ ನೀಡಿದ್ದು, ತಾಂತ್ರಿಕ ಸಮಸ್ಯೆ ಉಂಟಾಗಿ ಸಮೀಕ್ಷೆ ವಿಳಂಬವಾಯಿತು. ಶಿಕ್ಷಕರಿಗೆ ಬೀದಿಗಳು, ಮನೆಗಳನ್ನು ಹಂಚಿಕೆ ಮಾಡುವುದು ಸೇರಿದಂತೆ ಹಲವು ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸಿ ಗಣತಿ ಆರಂಭಿಸಿದ್ದೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ. ಹುಬ್ಬಳ್ಳಿಯಲ್ಲೂ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿತ್ತು.
ಸಮೀಕ್ಷೆ ಮುಂದೂಡುವಂತೆ ಒಕ್ಕಲಿಗ, ಲಿಂಗಾಯತರ ಒತ್ತಾಯ: ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದ್ದು, ಸಮೀಕ್ಷೆಯನ್ನು ನಡೆಸಲು ಕೆಲ ಸಮಯ ನೀಡಬೇಕು. ಕೇವಲ 15 ದಿನದಲ್ಲಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಬೇಕು ಎಂದು ಒಕ್ಕಲಿಗ, ಲಿಂಗಾಯತ ಸಮುದಾಯದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಕ್ಕಲಿಗ ಲಿಂಗಾಯತರ ಮುಖಂಡರು ಭೇಟಿ ಮಾಡಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಮನೆ ಮನೆಯ ಸಮೀಕ್ಷೆ ನಡೆಸಲು ಗಣತಿದಾರರನ್ನು ಆಯಾ ಬ್ಲಾಕ್ಗಳಿಗೆ ಈಗಾಗಲೇ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12,43,000 ಕುಟುಂಬಗಳ ಸಮೀಕ್ಷೆಯು ಪ್ರಾರಂಭವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ ತಿಳಿಸಿದ್ದಾರೆ.







