'ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ' ವರದಿ ಸಲ್ಲಿಕೆಯಾದ ಕೂಡಲೇ ಸ್ವೀಕರಿಸಿ ಜಾರಿಗೊಳಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರು ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ತಕ್ಷಣವೇ ಅದನ್ನು ಸ್ವೀಕರಿಸಿ, ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬುಧವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಎಲ್.ಜಿ.ಹಾವನೂರು ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೀಸಲಾತಿ ಪ್ರಮಾಣವನ್ನು ಶೇ.75ರ ವರೆಗೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಹಾಗೂ ನಾನು ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹಿಂದುಳಿದ ಮತ್ತು ದಲಿತರು ತಮ್ಮ ವಿರೋಧಿಗಳಾದ ಬಿಜೆಪಿ, ಆರೆಸ್ಸೆಸ್, ಎಬಿವಿಪಿಗೆ ಸೇರುತ್ತಾರಲ್ಲಾ ಅವರಿಗೆ ಏನು ಹೇಳುವುದು. ಬಿಜೆಪಿ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ, ಆರೆಸ್ಸೆಸ್ ಸೇರಿ ಇವರೇ ಮೂಲ ಆರೆಸ್ಸೆಸ್‍ನವರಂತೆ, ಇವರೇ ಹೆಡ್ಗೆವಾರ್ ರೀತಿ ಮಾತನಾಡುತ್ತಾರೆ ಎಂದು ಅವರು ಹೇಳಿದರು.
ಹಾವನೂರು ವರದಿಯನ್ನು ದೇವರಾಜ ಅರಸರು ಹಿಂದುಳಿದವರ ಬೈಬಲ್ ಎಂದು ಕರೆದಿದ್ದಾರೆ. ಸುಪ್ರೀಂಕೋರ್ಟ್ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ. ಸಾಮಾನ್ಯ ಹಳ್ಳಿಯ ಪರಿಶಿಷ್ಟ ಕುಟುಂಬದಲ್ಲಿ ಹುಟ್ಟಿದ ಹಾವನೂರು ಅವರು ವಿದ್ಯಾರ್ಥಿ ದೆಸೆಯಲ್ಲೇ ಪ್ರತಿಭಟನೆ ಮಾಡುವ ಗುಣ ಹೊಂದಿದ್ದರು. ಹಾವನೂರು ಅವರು ವಾಲ್ಮೀಕಿ ಜಾತಿಯ ಮೊದಲ ವಕೀಲರಾಗಿದ್ದರು ಎಂದು ಅವರು ಸ್ಮರಿಸಿದರು.
ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವುದು ಡಾ.ಅಂಬೇಡ್ಕರ್ ಅವರ ಮಾತಾಗಿತ್ತು. ನಮ್ಮಲ್ಲಿ ಶಿಕ್ಷಣ ಪ್ರಮಾಣ ಶೇ.68ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಹಿಂದುಳಿದ ವರ್ಗದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲ್ಜಾತಿಯ ಬಡವರನ್ನೂ ಬಹುವಚನದಿಂದ ಕರೆಯುವುದು, ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬುದ್ದ, ಬಸವಣ್ಣ, ಅಂಬೇಡ್ಕರ್ ಅವರೆಲ್ಲಾ ಬಂದು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಇವರು ಹೋರಾಡಿದಾಗ ಜಾತಿ ವ್ಯವಸ್ಥೆ ಸಡಿಲ ಆದಂತೆ ಕಾಣುತ್ತದೆ. ಆದರೆ ಬಳಿಕ ಮತ್ತೆ ಗಟ್ಟಿಯಾಗುತ್ತದೆ. ಜಾತಿ ವ್ಯವಸ್ಥೆ ಮಾತ್ರ ಹೋಗುತ್ತಿಲ್ಲ. ಆರ್ಥಿಕ, ಸಾಮಾಜಿಕ ಅಸಮಾನತೆಗೆ ತುತ್ತಾಗಿರುವ ಜನರೇ ಸ್ವಾತಂತ್ರ್ಯ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದನ್ನು ನಾವು ಮರೆಯಬಾರದು ಎಂದು ಹೇಳಿದರು.
ಪ್ರೊ. ರವಿವವರ್ಮ ಕುಮಾರ್ ಅವರು ಎಲ್.ಜಿ.ಹಾವನೂರು ಅವರ ಹೆಸರನ್ನು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯಕ್ಕೆ ನಾಮಕರಣ ಮಾಡಿ ಎಂದು ಮನವಿ ಮಾಡಿದ್ದು ಆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಬೈರತಿ ಸುರೇಶ್, ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್, ಮಾಜಿ ಸದಸ್ಯ ಜಿ.ಡಿ.ಗೋಪಾಲ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮನುಸ್ಮೃತಿ ಶೂದ್ರ ವಿರೋಧಿ: ತಮ್ಮ ಭಾಷಣದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮನುಸ್ಮೃತಿಯ ಶೂದ್ರ ವಿರೋಧಿ ಶ್ಲೋಕಗಳನ್ನು ಓದಿ, ಶೂದ್ರ ಸಮುದಾಯವನ್ನು ನಾಯಿಗೆ ಹೋಲಿಸಿ ತಾರತಮ್ಯ ಆಚರಿಸುವ ಶ್ಲೋಕಗಳ ಅರ್ಥ ತಿಳಿಸಿದರು. ನೀವೆಲ್ಲಾ ಮನುಸ್ಮೃತಿ ಓದಿ ಜಾತಿ ತಾರತಮ್ಯದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.







