ಕನ್ನಡ ಹಾಡಿನ ಕೋರಿಕೆಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ವಿವಾದ: 18 ತಿಂಗಳ ಬಳಿಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್
‘ನನ್ನ ಮಾತಿನಿಂದ ನೋವಾಗಿದ್ದರೆ ಸಾವಿರ ಬಾರಿ ಕ್ಷಮೆ ಕೇಳಲೂ ಸಿದ್ಧ’ ಎಂದ ಗಾಯಕ; ಕನ್ನಡಿಗರೊಂದಿಗಿನ 30 ವರ್ಷಗಳ ಬಾಂಧವ್ಯ ಸ್ಮರಣೆ

ಬೆಂಗಳೂರು : ಕನ್ನಡ ಹಾಡಿನ ಕೋರಿಕೆಯನ್ನು ಪಹಲ್ಗಾಮ್ ಉಗ್ರ ದಾಳಿಗೆ ಹೋಲಿಸಿ ವಿವಾದಕ್ಕೆ ಕಾರಣವಾಗಿದ್ದ ಗಾಯಕ ಸೋನು ನಿಗಮ್, ಸುಮಾರು 18 ತಿಂಗಳ ಬಳಿಕ ಕನ್ನಡಿಗರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
‘ನನ್ನ ಮಾತಿನಿಂದ ನಿಮಗೆ ನೋವಾಗಿದ್ದರೆ ತುಂಬು ಹೃದಯದಿಂದ ಕ್ಷಮೆಯಾಚಿಸುತ್ತೇನೆ. ನಮ್ಮ ನಡುವಿನ ಸಂಬಂಧ ಉಳಿಸಿಕೊಳ್ಳಲು ಸಾವಿರ ಬಾರಿ ಕ್ಷಮೆ ಕೇಳಲೂ ಸಿದ್ಧ’ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ ಕರ್ನಾಟಕದ ಜನರನ್ನು ‘ನನ್ನ ಪ್ರೀತಿಯ ಕುಟುಂಬ’ ಎಂದು ಸಂಬೋಧಿಸಿರುವ ಸೋನು ನಿಗಮ್, ಕನ್ನಡಿಗರು ಕಳೆದ 30 ವರ್ಷಗಳಿಂದ ತನಗೆ ಅಪಾರ ಪ್ರೀತಿ ಮತ್ತು ಗೌರವ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.
‘ನನ್ನ ಸತ್ಯ ಏನೆಂಬುದು ನನಗೆ ಗೊತ್ತು, ನನ್ನ ಭಗವಂತನಿಗೆ ಗೊತ್ತು ಹಾಗೂ ಅಂದು ಸಂಜೆ ಆಡಿಟೋರಿಯಂನಲ್ಲಿ ಹಾಜರಿದ್ದ ಎಲ್ಲರಿಗೂ ಗೊತ್ತು. ನಾರಾಯಣ ಗೌಡ ಅವರೊಂದಿಗೆ ನಾನು ಅತ್ಯಂತ ಆತ್ಮೀಯವಾಗಿ ಮತ್ತು ಗೌರವಯುತವಾಗಿ ಚರ್ಚೆ ನಡೆಸಿದ್ದೇನೆ. ಅವರೊಬ್ಬ ಅದ್ಭುತ ವ್ಯಕ್ತಿ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ತಿಳಿಸಿದ್ದಾರೆ.
‘ಸಾವಿರ ಬಾರಿ ಕ್ಷಮೆ ಕೇಳಲೂ ಸಿದ್ಧ’ :
‘ನೀವು ಯಾರನ್ನಾದರೂ ಪ್ರೀತಿಸಿದಾಗ ಮತ್ತು ಆ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂದು ಬಯಸಿದಾಗ, ಸಾವಿರ ಬಾರಿ ಕ್ಷಮೆ ಕೇಳಲೂ ಹಿಂಜರಿಯುವುದಿಲ್ಲ. ಹೀಗಾಗಿ, ನನ್ನ ಪ್ರೀತಿಯ ಕುಟುಂಬವೇ, ಅರಿಯದೆ ನಾನು ಆಡಿದ ಯಾವುದೇ ಮಾತಿನಿಂದ ನಿಮಗೆ ನೋವಾಗಿದ್ದರೆ, ಅದಕ್ಕಾಗಿ ತುಂಬು ಹೃದಯದಿಂದ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.
‘ನಾನು ಯಾರಿಗೂ ನೋವುಂಟು ಮಾಡುವ ವ್ಯಕ್ತಿಯಲ್ಲ. ಅದರಲ್ಲೂ ನನ್ನ ಕರ್ನಾಟಕದ ಕುಟುಂಬಕ್ಕೆ ಎಂದಿಗೂ ನೋವುಂಟು ಮಾಡುವುದಿಲ್ಲ. ಕಳೆದ 30 ವರ್ಷಗಳಿಂದ ನೀವು ನನಗೆ ಅಪಾರ ಪ್ರೀತಿ ಮತ್ತು ಗೌರವ ನೀಡಿದ್ದೀರಿ. ನಮ್ಮ ನಡುವಿನ ಈ ಬಾಂಧವ್ಯದಲ್ಲಿ ಯಾವುದೇ ತಪ್ಪು ಕಲ್ಪನೆ ಅಥವಾ ಕಹಿ ಭಾವನೆಗಳು ಇರಬಾರದು’ ಎಂದು ಸೋನು ನಿಗಮ್ ಸಂದೇಶದಲ್ಲಿ ತಿಳಿಸಿದ್ದಾರೆ.
Bollywood Singer Sonu Nigam apologises to Kannadigas, nearly 18 months after his Pahalgam remark sparked outrage over demands for Kannada songs.
“If you love someone and want the relationship to last, you don’t mind saying sorry 1,000 times,” he says.
The apology comes amid protests over his scheduled Bengaluru concert.
#Bengaluru #Karnataka @narayanagowdru @karave_KRV #Bollywood
— Imran Khan (@KeypadGuerilla) October 19, 2026






