ಕನ್ನಡ ಗೀತೆ ಹಾಡಲು ಆಗ್ರಹಿಸಿದ್ದನ್ನು ʼಭಯೋತ್ಪಾದನಾ ದಾಳಿʼಗೆ ಹೋಲಿಸಿದ ಸೋನು ನಿಗಮ್; ಕನ್ನಡಿಗರ ಆಕ್ರೋಶ
ಖ್ಯಾತ ಗಾಯಕನ ವಿರುದ್ಧ ಕರವೇ ದೂರು

ಸೋನು ನಿಗಮ್ PC : instagram
ಬೆಂಗಳೂರು: ತಮ್ಮ ಹಾಡುಗಳ ಮೂಲಕ ಕನ್ನಡಿಗರಿಗೆ ಸಮೀಪವಾಗಿರುವ ಗಾಯಕ ಸೋನು ನಿಗಮ್ ಅವರು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನು ನಿಗಮ್ ಸಂಗೀತ ಪ್ರದರ್ಶನದ ವೇಳೆ ಕನ್ನಡ ಹಾಡು ಹಾಡುವಂತೆ ವೀಕ್ಷಕರೊಬ್ಬರು ಕೇಳಿಕೊಂಡಿದ್ದು, ಇದಕ್ಕೆ ಸೋನು ನೀಡಿರುವ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಆಗ್ರಹಿಸಿದ್ದಾನೆ ಎನ್ನಲಾಗಿದೆ. ಈ ವೇಳೆ, ತಮ್ಮ ಹಾಡನ್ನು ನಿಲ್ಲಿಸಿದ ಸೋನು ನಿಗಮ್ ತಾಳ್ಮೆ ಕಳೆದುಕೊಂಡು, "ಪಹಲ್ಗಾಮ್ನಲ್ಲಿ ನಡೆದ ಘಟನೆಗೆ ಇದೇ ಕಾರಣ. ದಯವಿಟ್ಟು ನಿಮ್ಮ ಮುಂದೆ ಯಾರು ನಿಂತಿದ್ದಾರೆಂದು ನೋಡಿ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ" ಎಂದು ಹೇಳಿದ್ದಾರೆ.
ಸೋನು ನಿಗಮ್ ಅವರ ಈ ಹೇಳಿಕೆ ಅಂತರ್ಜಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಕೆಲವರು ನಿಗಮ್ ಅವರನ್ನು ಹೊಗಳಿದರೆ, ಇತರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನ ವೃತ್ತಿಜೀವನದಲ್ಲಿ, ನಾನು ಬಹು ಭಾಷೆಗಳಲ್ಲಿ ಹಾಡಿದ್ದೇನೆ, ಆದರೆ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡ ಭಾಷೆಯಲ್ಲಿವೆ. ನಾನು ನಿಮ್ಮ ನಗರಕ್ಕೆ ಬಂದಾಗಲೆಲ್ಲಾ, ನಾನು ತುಂಬಾ ಪ್ರೀತಿಯಿಂದ ಬರುತ್ತೇನೆ. ನಾವು ಬಹಳಷ್ಟು ಸ್ಥಳಗಳಲ್ಲಿ ಬಹಳಷ್ಟು ಪ್ರದರ್ಶನಗಳನ್ನು ಮಾಡುತ್ತೇವೆ, ಆದರೆ ಕರ್ನಾಟಕದಲ್ಲಿ ನಾವು ಪ್ರದರ್ಶನಗಳನ್ನು ಹೊಂದಿರುವಾಗಲೆಲ್ಲಾ, ನಾವು ನಿಮ್ಮ ಬಗ್ಗೆ ತುಂಬಾ ಗೌರವದಿಂದ ಬರುತ್ತೇವೆ. ನೀವು ನನ್ನನ್ನು ನಿಮ್ಮ ಕುಟುಂಬದವರಂತೆ ನಡೆಸಿಕೊಂಡಿದ್ದೀರಿ, ಆದರೆ ನನ್ನ ವೃತ್ತಿಜೀವನದಷ್ಟು ವಯಸ್ಸಾಗಿಲ್ಲದ ಅಲ್ಲಿನ ಹುಡುಗ ಕನ್ನಡದಲ್ಲಿ ಹಾಡಲು ಅಸಭ್ಯವಾಗಿ ಬೆದರಿಕೆ ಹಾಕುತ್ತಿರುವುದು ನನಗೆ ಇಷ್ಟವಾಗಲಿಲ್ಲ," ಎಂದು ನಿಗಮ್ ಹೇಳಿರುವ ವೀಡಿಯೊ ವೈರಲ್ ಆಗಿದೆ.
ಕನ್ನಡ ಹಾಡನ್ನು ಹಾಡುವಂತೆ ಕೇಳಿಕೊಂಡದ್ದನ್ನು ʼಪಹಲ್ಗಾಮ್ ಭಯೋತ್ಪಾದನಾ ದಾಳಿʼಗೆ ಹೋಲಿಸಿರುವುದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದು, ಇದು ಸೋನು ನಿಗಮ್ ಅವರಿಗೆ ಕನ್ನಡದ ಬಗ್ಗೆ ಇರುವ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಸೋನು ನಿಗಮ್ ವರ್ತನೆಗೆ ಕನ್ನಡದ ಲೇಖಕರು, ಕನ್ನಡ ಪರ ಹೋರಾಟಗಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇನ್ನು ಮುಂದೆ ಅವರನ್ನು ಕನ್ನಡ ಹಾಡುಗಳನ್ನು ಅವರಿಂದ ಹಾಡಿಸಬಾರದು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.
ಗಾಯಕ ಸೋನು ನಿಗಮ್ ವಿರುದ್ಧ ಕರವೇ ದೂರು
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ನಿಯೋಗವು, "ಕನ್ನಡಿಗರಿಗೆ ಅವಮಾನ ಮತ್ತು ವಿವಿಧ ಭಾಷೆಯ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಿದ್ದಾರೆ" ಎಂದು ಆರೋಪಿಸಿ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದೆ.
ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡದಲ್ಲಿ ಹಾಡು ಹೇಳಿ ಎಂದು ಸಾರ್ವಜನಿಕರು ಕೋರಿದ್ದಕ್ಕೆ ಗಾಯಕ ಸೋನು ನಿಗಮ್ ಅವರು ‘ಕನ್ನಡ, ಕನ್ನಡ, ಕನ್ನಡ, ಇದಕ್ಕೇನೇ, ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು’ ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದಾರೆ. ಈ ಕೂಡಲೇ ಸೋನು ನಿಗಮ್ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯದ ಭಾವನೆಗಳಿಗೆ ತೀವ್ರ ಘಾಸಿಯನ್ನುಂಟುಮಾಡಿದ್ದು, ಕರ್ನಾಟಕದ ವಿವಿಧ ಭಾಷಿಕ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆಯಲ್ಲದೆ ಹಿಂಸೆಗೆ ಪ್ರಚೋದನೆ ನೀಡುವಂತಿದೆ. ಈಗಾಗಲೇ ಸೋನು ನಿಗಮ್ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಕೋಟ್ಯಂತರ ಕನ್ನಡಿಗರು ಆಕ್ರೋಶಿತರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೋನು ನಿಗಮ್ ಅವರ ಹೇಳಿಕೆಗಳು ಆಕ್ಷೇಪಾರ್ಹ, ವಿಭಜನಕಾರಿ ಮತ್ತು ಸಾಮುದಾಯಿಕ ಸೌಹಾರ್ದಕ್ಕೆ ಹಾನಿಕಾರಕವಾಗಿವೆ. ಅವರ ಇಂತಹ ಹೇಳಿಕೆಗಳು ಕನ್ನಡಿಗರ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸುವಂತಿವೆ. ಅಲ್ಲದೆ ಸಮಾಜದಲ್ಲಿ ಸಮುದಾಯಗಳ ನಡುವೆ ವಿಭಜನೆಯನ್ನು ಮೂಡಿಸುತ್ತಿದೆ. ಸೋನು ನಿಗಮ್ ವಿರುದ್ಧ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ, ಕ್ರಿಮಿನಲ್ ಮಾನಹಾನಿಗಾಗಿ ಮತ್ತು ಭಾಷಿಕ ಭಾವನೆಗಳನ್ನು ಆಕ್ಷೇಪಿಸಿದ್ದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.







