ಸೋನು ನಿಗಮ್ ಕ್ಷಮೆಯಾಚನೆ: ಹೋರಾಟ ಹಿಂಪಡೆದ ಕರ್ನಾಟಕ ರಕ್ಷಣಾ ವೇದಿಕೆ

ಬೆಂಗಳೂರು: ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ ಹೇಳಿಕೆ ಕುರಿತು ಗಾಯಕ ಸೋನು ನಿಗಮ್ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟವನ್ನು ಇಲ್ಲಿಗೆ ನಿಲ್ಲಿಸಲು ನಿರ್ಧರಿಸಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ಸೋನು ನಿಗಮ್ ತಮ್ಮೊಂದಿಗೆ ಮಾತನಾಡಿದ್ದು, ಈ ಹಿಂದೆ ನೀಡಿದ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿರುವುದನ್ನು ಅರ್ಥಮಾಡಿಕೊಂಡಿದ್ದಾರೆ. ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
“ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಬಗ್ಗೆ ವೈಯಕ್ತಿಕವಾಗಿ ಯಾವುದೇ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ, ಅವರ ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ನಮ್ಮ ಪ್ರತಿಭಟನೆ ಮತ್ತು ಆಕ್ರೋಶ ಸಹಜವಾಗಿತ್ತು” ಎಂದು ನಾರಾಯಣಗೌಡ ಹೇಳಿದ್ದಾರೆ.
ಸೋನು ನಿಗಮ್ ಈಗ ಕ್ಷಮೆಯಾಚಿಸಿರುವುದರಿಂದ ವಿವಾದವನ್ನು ಇಲ್ಲಿಗೆ ಮುಗಿಸುವುದು ಸೂಕ್ತ. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ ಮತ್ತು ಸಂಸ್ಕಾರ. ಹೀಗಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಹೋರಾಟವನ್ನು ಹಿಂಪಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಂಟಸಾಲ, ಪಿ.ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಹಾಗೂ ಚಿತ್ರಾ ಅವರಂತಹ ಕನ್ನಡೇತರ ಗಾಯಕರು ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರು ಅವರನ್ನು ಅಪಾರವಾಗಿ ಪ್ರೀತಿಸಿ ಗೌರವಿಸಿದ್ದಾರೆ. ಅವರ ಕೊಡುಗೆಗೆ ಕನ್ನಡಿಗರ ಕೃತಜ್ಞತೆ ಸದಾ ಇರುತ್ತದೆ ಎಂದು ಅವರು ಸ್ಮರಿಸಿದ್ದಾರೆ.
ಸೋನು ನಿಗಮ್ ಕೂಡ ಈ ಮಹಾನ್ ಗಾಯಕರ ಸಾಲಿನಲ್ಲಿ ಗುರುತಿಸಿಕೊಂಡವರು. ಈ ಕಹಿ ಘಟನೆಯನ್ನು ಮರೆತು ಮುಂದುವರಿಯಬೇಕು. ಸೋನು ನಿಗಮ್ ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಬೇಕು ಹಾಗೂ ಕರ್ನಾಟಕದಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ನಡೆಯಬೇಕು ಎಂದು ನಾರಾಯಣಗೌಡ ಆಶಿಸಿದ್ದಾರೆ.
ಸಂಗೀತ ಮನುಷ್ಯನ ಸಂಕಟಗಳನ್ನು ಮರೆಸುವ ಸಂಜೀವಿನಿಯಾಗಿದೆ. ಸಂಗೀತದ ಮೂಲಕ ಪ್ರೀತಿ ಗೆಲ್ಲಲಿ, ಬದುಕು ಇನ್ನಷ್ಟು ಸಹನೀಯವಾಗಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.






