ಚುನಾವಣಾ ಸಂದರ್ಭ ಎಂದು ಭಾವಿಸಿ ಸದನಕ್ಕೆ ಬೇಗ ಬನ್ನಿ : ಸದಸ್ಯರಿಗೆ ಸ್ಪೀಕರ್ ಖಾದರ್ ಕಿವಿಮಾತು
"ಸದನಕ್ಕೆ ಬೇಗ ಬಂದರೆ ಜನರಿಗೆ ಖುಷಿ ಆಗುತ್ತೆ"

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆಗೆ ಮಲಗಿ ಬೆಳಿಗ್ಗೆ 5 ಗಂಟೆಗೆ ಎದ್ದು ಹೋಗುತ್ತೀರಲ್ಲವೇ, ಹಾಗೆಯೇ ಅಧಿವೇಶನವನ್ನು ಚುನಾವಣೆ ಭಾವಿಸಿ ಸದನಕ್ಕೆ ಬೇಗ ಬನ್ನಿ. ನೀವು ಬೇಗ ಬಂದರೆ ಜನರೂ ಕೂಡ ನಿಮಗೆ ಹೆಚ್ಚು ಗೌರವ ಕೊಡುತ್ತಾರೆ ಎಂದು ಶಾಸಕರಿಗೆ ಸ್ಪೀಕರ್ ಯು.ಟಿ.ಖಾದರ್ ಕಿವಿಮಾತು ಹೇಳಿದರು.
ಗುರುವಾರದ ಅಧಿವೇಶನ 7 ಗಂಟೆಗೆ ಪ್ರಾರಂಭವಾದ್ದರಿಂದ ಜನರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಸ್ಪೀಕರ್, ನೀವು ಸದನಕ್ಕೆ ಬೇಗ ಬಂದರೆ ಜನರಿಗೆ ಖುಷಿ ಆಗುತ್ತೆ. ನಮ್ಮ ಶಾಸಕರು ನಮ್ಮ ಪರವಾಗಿ ಚರ್ಚೆ ಮಾಡಲು ಸದನಕ್ಕೆ ಬೇಗ ಹೋಗುತ್ತಾರೆ ಎಂದು ಅವರಿಗೂ ನಿಮ್ಮ ಮೇಲೆ ಗೌರವ ಬರುತ್ತದೆ. ಹೀಗಾದಾಗ ಜನರೂ ನಿಮಗೆ ಸಹಕಾರ ಕೊಡುತ್ತಾರೆ. ಯಾವಾಗ ನೀವು ಅಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಎದ್ದು ಟೀ ಕುಡಿದು ಆರಾಮವಾಗಿ 10 ಗಂಟೆಗೆವರೆಗೆ ಇದ್ದರೆ ಜನರು ನಿಮ್ಮ ಬಳಿ ಕೆಲಸ ಮಾಡಿಕೊಡುವಂತೆ ಬರುತ್ತಾರೆ. ನೀವು ಬ್ಯುಸಿಯಾಗಿದ್ದರೆ ಜನರಿಗೂ ಅರ್ಥ ಆಗುತ್ತೆ ಎಂದರು.
ಮೂರು ತಿಂಗಳಿಗೊಮ್ಮೆ ನಮಗೆ ಅಧಿವೇಶನ ಬರುವಂತದ್ದು, ನಿಗಧಿತ ಸಮಯದೊಳಗೆ ನಮಗೆ ಎಲ್ಲ ಸದಸ್ಯರು ಮಾತಾಡಬೇಕು, ಬಿಲ್ ಪಾಸ್ ಆಗಬೇಕು. ರೆಸಲ್ಯೂಷನ್ ಆಗಬೇಕು ಚರ್ಚೆ ಆಗಬೇಕು. ಇದೆಲ್ಲ ಈ ಸಮಯ ವ್ಯಾಪ್ತಿಯಲ್ಲಿ ಮಾಡುವಾಗ ನಾವು ಸ್ವಲ್ಪ ಬೇಗ ಸದನ ಪ್ರಾರಂಭಿಸುತ್ತೇವೆ ಎಂದು ಹೇಳಿದರು.







