ಚುನಾವಣೆ ಬೇಕು ಎನ್ನುವವರು ನನಗೆ ರಾಜೀನಾಮೆ ಕೊಡಿ : ಸ್ಪೀಕರ್ ಯು.ಟಿ.ಖಾದರ್ ಚಾಟಿ

ಯು.ಟಿ.ಖಾದರ್
ಬೆಳಗಾವಿ : ‘ಚುನಾವಣೆ ಬೇಕು ಎನ್ನುವವರೆಲ್ಲರೂ ಕೈ ಎತ್ತಿ, ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ’ ಎಂದು ‘ಬನ್ನಿ ಚುನಾವಣೆಗೆ’ ಎಂದು ತಮ್ಮ ತಮ್ಮಲ್ಲೇ ಸವಾಲು ಹಾಕುತ್ತಿದ್ದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಗೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಚಾಟಿ ಬೀಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ವಿಚಾರ ಸಂಬಂಧ ಸದನದಲ್ಲಿ ಸಂದರ್ಭದಲ್ಲಿ ಬಿಜೆಪಿಯ ಸದಸ್ಯ ವಿ.ಸುನೀಲ್ ಕುಮಾರ್, ‘ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ನೀವು ಚುನಾವಣೆಗೆ ಬನ್ನಿ, ನಿಮಗೆ ಗೊತ್ತಾಗುತ್ತದೆ’ ಎಂದು ಆಡಳಿತ ಪಕ್ಷಗಳ ಸದಸ್ಯರನ್ನು ಕೆಣಕಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ಯಾರಿಗೆ ಚುನಾವಣೆ ಬೇಕು ಕೈಎತ್ತಿ. ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಾನು ಕೂಡಲೇ ಆ ರಾಜೀನಾಮೆಯನ್ನು ಅಂಗೀಕರಿಸಿ, ರಾಜ್ಯಪಾಲರಿಗೆ ರವಾನೆ ಮಾಡಿ ಚುನಾವಣೆ ನಡೆಸಲು ಕೋರುವೆ. ಚುನಾವಣೆ ಬೇಕು ಎನ್ನುವವರೆಲ್ಲರೂ ರಾಜೀನಾಮೆ ನೀಡಿ ಮತ್ತೊಮ್ಮೆ ಗೆದ್ದು ಬನ್ನಿ’ ಎಂದು ಕಾಲೆಳೆದರು.
ಈ ಹಂತದಲ್ಲಿ ಎದ್ದುನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ಸರಕಾರಕ್ಕೆ ರಾಜ್ಯದ ಜನತೆ ಆಶೀರ್ವಾದವಿದೆ. ದೇಶಕ್ಕೆ ಮಾದರಿಯಾಗಿರುವ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುತ್ತಿದ್ದೇವೆ ಎಂದು ಏರಿದ ಧ್ವನಿಯಲ್ಲಿ ನುಡಿದರು.
ಆಗ ಮಧ್ಯಪ್ರವೇಶಿಸಿದ ಬಿಜೆಪಿ ಸಿ.ಸಿ.ಪಾಟೀಲ್, ‘ಪ್ರಿಯಾಂಕ್ ಖರ್ಗೆ ಅವರಿಗೆ ಸ್ಪೀಕರ್ ಪೀಠಕ್ಕಿಂತಲೂ ಎತ್ತರದ ಸ್ಥಾನವನ್ನು ಕಲ್ಪಿಸಬೇಕು. ಅವರು ಎಲ್ಲ ವಿಚಾರಕ್ಕೂ ಎದ್ದು ನಿಂತು ಮಾತನಾಡುವ ಮೂಲಕ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.







