ಮಂಗಳೂರಿನಲ್ಲಿ ನಡೆದ ವಿಶೇಷ ಸಂಪುಟ ಸಭೆಗೆ 3.83 ಕೋಟಿ ರೂ. ವೆಚ್ಚ!

ಬೆಂಗಳೂರು : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ವಿಶೇಷ ಸಂಪುಟ ಸಭೆಯ ವ್ಯವಸ್ಥೆಗಳಿಗಾಗಿ ರಾಜ್ಯ ಸರಕಾರವು 3.83 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಸಿ, ಕರಾವಳಿ ಭಾಗದ ಅಭಿವೃದ್ಧಿಗೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಒಂದೇ ದಿನದ ಸಭೆಗಾಗಿ ದೊಡ್ಡ ಮೊತ್ತದ ಹಣವನ್ನು ವೆಚ್ಚ ಮಾಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸೆಪ್ಟೆಂಬರ್ 17ರಂದು ಆರ್ಥಿಕ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಸಂಪುಟ ಸಭೆಯ ಪೂರ್ವಸಿದ್ಧತೆ ಮತ್ತು ವಿವಿಧ ವ್ಯವಸ್ಥೆಗಳಿಗಾಗಿ 3.83 ಕೋಟಿ ರೂ. ಹಣವನ್ನು ಮಂಜೂರು ಮಾಡಿದೆ.
ಈ ವೆಚ್ಚದಲ್ಲಿ ಕೆಲ ಕಾಮಗಾರಿಗಳು, ಹಿರಿಯ ಅಧಿಕಾರಿಗಳಿಗೆ ಆತಿಥ್ಯ, ಇಂಧನ, ಹೆಚ್ಚುವರಿ ವಾಹನಗಳ ಬಾಡಿಗೆ, ಸಾರಿಗೆ ವ್ಯವಸ್ಥೆ, ವೇದಿಕೆ ನಿರ್ವಹಣೆ ಸೇರಿದಂತೆ ಇತರ ವ್ಯವಸ್ಥೆಗಳು ಒಳಗೊಂಡಿವೆ ಎಂದು ಹೇಳಲಾಗಿದೆ.
ಈ ವೆಚ್ಚದಲ್ಲಿ ಕೆಲ ವಸ್ತುಗಳ ಖರೀದಿ ಪ್ರಕ್ರಿಯೆಗೆ 'ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆಗಳ ಕಾಯ್ದೆ-1999'ರ(ಕೆಟಿಟಿಪಿ) ನಿಯಮಗಳಿಂದ ವಿನಾಯಿತಿ ನೀಡಲು ಸರಕಾರ ಕಾಯ್ದೆಯ ಸೆಕ್ಷನ್ 4(ಜಿ)ಕ್ಕೆ ಅನ್ವಯಿಸಿರುವುದು ವಿಶೇಷವಾಗಿದೆ.
ಆರ್ಥಿಕ ಇಲಾಖೆಯ ವೆಚ್ಚ ಕೋಶ ಹೊರಡಿಸಿರುವ ಆದೇಶದಲ್ಲಿ, ಸಮಂಜಸ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಈ ಸಂಪುಟ ಸಭೆಗೆ ಸ್ಥಳೀಯ ಆಡಳಿತ ಸೇರಿದಂತೆ ಇತರ ವಿವಿಧ ಇಲಾಖೆಗಳ ಮೂಲಕವೂ ವೆಚ್ಚ ಮಾಡಿರುವ ಸಾಧ್ಯತೆಯಿದ್ದು, ಈ ಕುರಿತ ವಿವರಗಳು ಈ ಮೇಲ್ಕಂಡ ಆದೇಶದಲ್ಲಿ ಉಲ್ಲೇಖವಾಗಿಲ್ಲ ಎಂದು ತಿಳಿದು ಬಂದಿದೆ.






