‘ರಾಜ್ಯದ ಆರ್ಥಿಕ ಸ್ಥಿತಿ’ಯ ಬಗ್ಗೆ ಹಣಕಾಸು ಇಲಾಖೆ ಪತ್ರ; ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ

ಬೆಂಗಳೂರು : ‘ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆ, ರಾಜ್ಯ ಸರಕಾರದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದೆ ಎಂಬ ವಿಚಾರವು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾದ ಪ್ರಸಂಗವು ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ, ಬರದ ಸಮಸ್ಯೆ ಪ್ರಸ್ತಾಪಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಪಾದಯಾತ್ರೆ ಕುರಿತು ಉಲ್ಲೇಖಿಸಿದರು. ಇದಕ್ಕೆ ಆಕ್ಷೇಪಿಸಿದ ಆಹಾರ ಸಚಿವ ರಿಝ್ವಾನ್ ಅರ್ಶದ್, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮಾತನಾಡುವುದನ್ನು ಬಿಟ್ಟು, ಪಾದಯಾತ್ರೆ ಮೂಲಕ ಯಾರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದಕ್ಕೆ ಧ್ವನಿಗೂಡಿಸಿದ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ, ‘ಪಾದಯಾತ್ರೆ ಬಗ್ಗೆ ವೈಭವೀಕರಣ ಮಾಡುವ ಅಗತ್ಯವಿಲ್ಲ. ಬರ ಪರಿಸ್ಥಿತಿಯ ಬಗ್ಗೆ ಸರಕಾರ ಏನು ಮಾಡಬೇಕೆಂದು ಸಲಹೆ ಕೊಡಿ. ಕೇಂದ್ರ ಸರಕಾರದಿಂದ ಅಗತ್ಯ ನೆರವು ಕೊಡಿಸುವ ಕುರಿತು ಬೆಳಕು ಚೆಲ್ಲಬೇಕು. ಅದು ಬಿಟ್ಟು ಬಿಜೆಪಿ ಪಾದಯಾತ್ರೆ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ’ ಎಂದು ಹೇಳಿದರು.
ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆದು ಸದನದ ಗದ್ದಲ, ಗೊಂದಲದ ಗೂಡಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಸದಸ್ಯರಾದ ಆರಗ ಜ್ಞಾನೇಂದ್ರ, ಸತೀಶ್ ರೆಡ್ಡಿ, ಡಾ.ಅಶ್ವತ್ಥ ನಾರಾಯಣ್ ಎದ್ದು ನಿಂತು ಮಾತನಾಡಲು ಮುಂದಾದರು. ಸಚಿವರಾದ ಭೈರತಿ ಸುರೇಶ್, ಬಾಲಕೃಷ್ಣ, ರಿಝ್ವಾನ್ ಅರ್ಶದ್, ಚಲುವರಾಯಸ್ವಾಮಿ ಮಾತನಾಡಲು ಮುಂದಾಗಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸಚಿವ ರಿಝ್ವಾನ್ ಅರ್ಶದ್ ಮಾತನಾಡಿ, ‘ಪಾದಯಾತ್ರೆ ಸಂದರ್ಭದಲ್ಲಿ ನೀವು ಬರ ಪರಿಸ್ಥಿತಿ, ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪಿಸದೇ ಸಚಿವರ ರಾಜೀನಾಮೆಗೆ ಒತ್ತಾಯ ಮಾಡಿದ್ದೀರಿ’ ಎಂದು ಛೇಡಿಸಿದರು. ಆಗ ಎದ್ದುನಿಂತ ಆರ್.ಅಶೋಕ್, ‘ಆರ್ಥಿಕ ಇಲಾಖೆ ಪತ್ರ ಸಿಎಂಗೆ ಬರೆದಿದೆ. ಸರಕಾರದ ಬೊಕ್ಕಸದಲ್ಲಿ ಒಂದು ನಯಾಪೈಸೆ ಹಣವಿಲ್ಲ. ಅದು ಏಕೆ ಹೊರಗೆ ಬಂತು? ಮೊದಲು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ’ ಎಂದು ಹೇಳಿದರು.
ಈ ವೇಳೆ ತಿರುಗೇಟು ನೀಡಿದ ಸಚಿವರಾದ ಯು.ಟಿ.ಖಾದರ್, ಪಿ.ಎಂ.ನರೇಂದ್ರಸ್ವಾಮಿ, ಬಾಲಕೃಷ್ಣ, ‘ಆರ್ಥಿಕ ಇಲಾಖೆಯವರು ಹೀಗೆ ಹೇಳಿದ ಕೂಡಲೇ ನಮ್ಮ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವೇ?. ಅಧಿಕಾರಿಗಳು ಹೀಗೆಯೇ ಹೇಳುವುದು. ನಾವು, ನಮ್ಮ ಸರಕಾರ ಎಲ್ಲವನ್ನು ಸರಿದೂಗಿಸಲಿದೆ. ಅದರ ಚಿಂತೆ ನಿಮಗೇಕೇ?’ ಎಂದು ಪ್ರಶ್ನಿಸಿದರು.
ಆರ್.ಅಶೋಕ್ ಮಾತನಾಡಿ, ಹಣಕಾಸು ಇಲಾಖೆ ಬರೆದಿರುವ ಪತ್ರ ಗೊತ್ತಿಲ್ಲವೇ? ಡಿ.ಕೆ.ಶಿವಕುಮಾರ್ ಸಿಎಂ ಆಗಿ ಬಂದಾಗ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಪತ್ರ ಹೊರಬಂದಿದೆ. ಹಾಗಿದ್ದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರಕಾರವನ್ನು ಪಾಪರ್ ಮಾಡಿ ಬಿಟ್ಟುಹೋಗಿದ್ದರೇ? ಎಂದು ಕೇಳಿದರು. ಈ ಹಂತದಲ್ಲಿ ಮತ್ತೆ ಮಾತಿನ ಚಕಮಕಿ ನಡೆಯಿತು.
ಬಾಲಕೃಷ್ಣ ಮಾತನಾಡಿ, ಕೇಂದ್ರ ಸರಕಾರದಿಂದ ಮೊದಲು ಬರ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿಸಿ. ಆರ್ಥಿಕ ಇಲಾಖೆಯ ಪತ್ರದಲ್ಲಿ ಎಲ್ಲಿಯೂ ಸರಕಾರ ದಿವಾಳಿಯಾಗಿದೆ ಎಂದು ಎಲ್ಲಿಯೂ ಉಲ್ಲೇಖಿಸಿಲ ಎಂದು ಛೇಡಿಸಿದರು.






