ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬನ್ನಿ : ಸುಧಾಕರ್ಗೆ ಎಸ್.ಆರ್.ವಿಶ್ವನಾಥ್ ಸವಾಲು
"ನೀವು ಪಕ್ಷದಲ್ಲಿ ಇರಿ ಎಂದು ನಾವು ಹೇಳಲ್ಲ"

ಸುಧಾಕರ್/ಎಸ್.ಆರ್.ವಿಶ್ವನಾಥ್
ಬೆಂಗಳೂರು : ʼಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬನ್ನಿ, ಆಗ ನಿಮ್ಮ ಜನಪ್ರಿಯತೆ ಒಪ್ಪಿಕೊಳ್ಳೋಣʼ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಸಂಸದ ಕೆ.ಸುಧಾಕರ್ಗೆ ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ಸುಧಾಕರ್ ವಿರುದ್ಧ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿಕಾರಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಬಿಜೆಪಿಗೆ ಬಂದು ವಾಪಸ್ ಹೋದರೆ ಉದ್ಧಾರ ಆಗಿದ್ದು ಇಲ್ಲ. ಇದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೂ ಅನ್ನಿಸಿದೆ. ಯಡಿಯೂರಪ್ಪ ವಾಪಸ್ ಬಿಜೆಪಿಗೆ ಬಂದೇ ಮುಖ್ಯಮಂತ್ರಿ ಆಗಿದ್ದು, ಸುಧಾಕರ್ ಅವರೇ ನೀವು ನಾಳೆ ಮುಖ್ಯಮಂತ್ರಿ ಆಗಬಹುಹುದು ಏನೋ. ನೀವು ಪಕ್ಷದಲ್ಲಿ ಇರಿ ಎಂದು ನಾವು ಹೇಳಲ್ಲ. ಹೋದರೆ ಕಳುಹಿಸಿಕೊಟ್ಟು ಪಕ್ಷ ಸಂಘಟನೆ ಮಾಡುತ್ತೇನೆʼ ಎಂದು ತಿರುಗೇಟು ನೀಡಿದರು.
ʼಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಅವರು ಮಾತಾಡಿರುವುದು ನಮಗೆ ಸರಿ ಎನಿಸಿಲ್ಲ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಅವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಸರಿ. ಬಿಟ್ಟು ಹೋಗುವುದಾದರೆ ಹೋಗಿʼ ಎಂದು ಆಕ್ರೋಶ ಹೊರಹಾಕಿದರು.





