ಜಿಬಿಎ ಚುನಾವಣೆ ಗೆಲುವಿಗೆ ಗ್ಯಾರಂಟಿಗಳೇ ಶ್ರೀರಕ್ಷೆ : ಸಲೀಂ ಅಹ್ಮದ್

ಬೆಂಗಳೂರು, ಸೆ.19 : ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆ ಚುನಾವಣೆಗಳ ಗೆಲುವಿಗೆ ಐದು ಗ್ಯಾರಂಟಿ ಯೋಜನೆಗಳೇ ಶ್ರೀ ರಕ್ಷೆಯಾಗಲಿವೆ ಎಂದು ವಿಧಾನ ಪರಿಷತ್‍ನ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಮಹಾಲಕ್ಷಿ ಲೇಔಟ್ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿಯಿಂದ ರಾಜ್ಯದ ಜನತೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಮ್ಮ ಸರಕಾರದ ಸಂಕಲ್ಪ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಸರಕಾರವು ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಬಿಜೆಪಿ ಸರಕಾರದ 11 ವರ್ಷದ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗದಿಂದ ಜನರು ಭ್ರಮನಿರಸನರಾಗಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ರಾಜ್ಯ ಸರಕಾರಕ್ಕೆ ಬರುವ ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.
ಸಭೆಯಲ್ಲಿ ಮಾಜಿ ಮೇಯರ್ ಹುಚ್ಚಪ್ಪ, ಕ್ಷೇತ್ರದ ಅಭ್ಯರ್ಥಿ ಕೇಶವಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ವಿರೋಧ ಪಕ್ಷದ ನಾಯಕ ಶಿವರಾಜ್, ಸುಧೀಂದ್ರ ಮತ್ತಿತರರು ಹಾಜರಿದ್ದರು.







