ಎಸೆಸೆಲ್ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ಪದ್ದತಿ; ಕರಡು ಅಧಿಸೂಚನೆ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಎ.17ರ ವರೆಗೆ ಅವಕಾಶ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯ ಸರಕಾರವು ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಶ್ರೇಣಿ (ಗ್ರೇಡಿಂಗ್) ಪದ್ದತಿಯನ್ನು ನೀಡುವ ಸಂಬಂಧ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಸಾರ್ವಜನಿಕರ ಸಲಹೆ, ಆಕ್ಷೇಪಣೆಗಳನ್ನು ಪಡೆಯಲು ತಿದ್ದುಪಡಿಯ ಕರಡು ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.
ಪ್ರತಿ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು ಆರು ವಿಷಯಗಳಿಗೆ ಒಟ್ಟು 625 ಅಂಕಗಳಿಗೆ ನಡೆಸಲಾಗುತ್ತದೆ. ಆದರೆ 2025-26ನೇ ಸಾಲಿನಿಂದ ತೃತೀಯ ಭಾಷೆ ಮತ್ತು ಎನ್ಎಸ್ಕ್ಯೂಎಫ್ ವಿಷಯಗಳಲ್ಲಿ ಪಡೆದ ಅಂಕಗಳನ್ನು ಶ್ರೇಣಿಗಳ (ಗ್ರೇಡ್) ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ ವಿಷಯಗಳನ್ನು ಅಂಕಪಟ್ಟಿಯಲ್ಲಿ ಹೆಚ್ಚುವರಿ ವಿಷಯಗಳಾಗಿ ನಮೂದಿಸಬೇಕು. ಈ ವಿಷಯಗಳನ್ನು ಉತ್ತೀರ್ಣರಾಗಲು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇನ್ನು ಮುಂದೆ ಪರೀಕ್ಷೆಯನ್ನು ಒಟ್ಟು 525 ಅಂಕಗಳಿಗೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಎಸೆಸೆಲ್ಸಿ ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಎ, ಬಿ, ಸಿ ಶ್ರೇಣಿಗಳನ್ನು ನೀಡಲಾಗುತ್ತದೆ. ಅದರಂತೆ, ಈ ವಿಷಯದಲ್ಲಿ ಶೇ.80 ರಿಂದ ಶೇ.100 ಅಂಕ ಪಡೆದರೆ ‘ಎ‘ ಶ್ರೇಣಿ, ಶೇ.50ರಿಂದ ಶೇ.79ರವರೆಗೆ ‘ಬಿ‘ ಮತ್ತು ಶೇ.49ರವರೆಗೆ ‘ಸಿ ಶ್ರೇಣಿಗಳನ್ನು ನೀಡಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಶೇ.33 ಅಂಕಗಳನ್ನು ಪಡೆಯಬೇಕು. ಒಟ್ಟು 525 ಅಂಕಗಳಲ್ಲಿ ಕನಿಷ್ಟ 173 ಅಂಕಗಳನ್ನು ಗಳಿಸುವುದರೊಂದಿಗೆ ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಟ 30 ಪ್ರತಿಶತ ಅಂಕಗಳನ್ನು ಗಳಿಸಿದರೆ ಅಂತಹ ಅಭ್ಯರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಲಾಗುವುದು ಎಂದು ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಎ.17ರವರೆಗೆ ಅವಕಾಶ: ಕರಡು ಅಧಿಸೂಚನೆಗೆ ಸಂಬಂಧಿಸಿ ಯಾವುದೇ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಎ.17ರೊಳಗಾಗಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಠಡಿ ಸಂಖ್ಯೆ 663, 6ನೇ ಮಹಡಿ, 2ನೇ ಗೇಟ್, ಬಹು ಮಹಡಿಗಳ ಕಟ್ಟಡ, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001ಗೆ ಸಲ್ಲಿಸಬಹುದು.






