ನಾಳೆಯಿಂದ (ಮೇ 18) ಎಸೆಸೆಲ್ಸಿ ಪರೀಕ್ಷೆ-2 ಆರಂಭ; 1.15 ಲಕ್ಷ ವಿದ್ಯಾರ್ಥಿಗಳು ನೋಂದಣಿ

ಸಾಂದರ್ಭಿಕ ಚಿತ್ರ | Image by rawpixel.com on Magnific
ಬೆಂಗಳೂರು : ರಾಜ್ಯಾದ್ಯಂತ ಮೇ 18 ರಿಂದ ಮೇ 25ರವರೆಗೆ ಎಸೆಸೆಲ್ಸಿ ಪರೀಕ್ಷೆ-2 ನಡೆಯುಲಿದ್ದು, ಪರೀಕ್ಷೆಗೆ ಒಟ್ಟು 1,15,112 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಬಯಸುವ 11,881 ವಿದ್ಯಾರ್ಥಿಗಳು ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ-1ಕ್ಕೆ ಹಾಜರಾಗಲು ಸಾಧ್ಯವಾಗದ 7,658 ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಣಿಯಾಗಿದ್ದಾರೆ.
ರಾಜ್ಯದಲ್ಲಿ 358 ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯುತ್ತಿದೆ. ಒಟ್ಟು ನೋಂದಣಿಯಾದ ವಿದ್ಯಾರ್ಥಿಗಳ ಪೈಕಿ 76,673 ಬಾಲಕರು ಮತ್ತು 38,439 ಬಾಲಕಿಯರಾಗಿದ್ದಾರೆ. 61,205 ಮಂದಿ ಪರೀಕ್ಷೆಗೆ ಹೊಸದಾಗಿ ನೋಂದಣಿಯಾದ ವಿದ್ಯಾರ್ಥಿಗಳಾಗಿದ್ದು, 18,505 ಮಂದಿ ಖಾಸಗಿ ಅಭ್ಯರ್ಥಿಗಳು ಹಾಗೂ 35,402 ಮಂದಿ ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ.
ಒಟ್ಟು 5,488 ಸರಕಾರಿ ಶಾಲೆಗಳಿಂದ 55,403 ವಿದ್ಯಾರ್ಥಿಗಳು, 3,250 ಅನುದಾನಿತ ಶಾಲೆಗಳಿಂದ 31,436 ವಿದ್ಯಾರ್ಥಿಗಳು ಮತ್ತು 5,060 ಖಾಸಗಿ ಶಾಲೆಗಳಿಂದ 28,273 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ-2ಕ್ಕೆ ನೋಂದಣಿಯಾಗಿದ್ದಾರೆ.
ಪರೀಕ್ಷೆ-2 ವೇಳಾಪಟ್ಟಿ:
ಮೇ 18ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್, ಮರಾಠಿ, ತಮಿಳು, ಉರ್ದು, ಸಂಸ್ಕೃತ ಪರೀಕ್ಷೆ, ಮೇ 19ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ಪರೀಕ್ಷೆ, ಮೇ 20ರಂದು ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ ಪರೀಕ್ಷೆ, ಮೇ 21ರಂದು ಗಣಿತ, ಸಮಾಜಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಮೇ 22ರಂದು ಬೆಳಗ್ಗೆ ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು, ಮರಾಠಿ, ಸಂಸ್ಕೃತ ಪರೀಕ್ಷೆ, ಮಧ್ಯಾಹ್ನ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ನೆಸ್, ಅಪರೆಲ್ ಮೇಡ್ ಅಪ್ಸ್ ಅಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್ ಪರೀಕ್ಷೆ, ಮೇ 23ರಂದು ಸಮಾಜ ವಿಜ್ಞಾನ, ಮೇ 25ರಂದು ಎಲಿಮೆಂಟ್ಸ್ ಆಫ್ ಎಲೆಕ್ಟಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ಸಿ ಮತ್ತು ಅರ್ಥಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ.






