ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | ಶೇ.27.67 ವಿದ್ಯಾರ್ಥಿಗಳು ಉತ್ತೀರ್ಣ
ನಾಲ್ವರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶವು ಶುಕ್ರವಾರದಂದು ಪ್ರಕಟವಾಗಿದ್ದು, ಪರೀಕ್ಷೆ ಬರೆದ ಶೇ.27.67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 3,15,564 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2025ರ ಎಸೆಸೆಲ್ಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಒಟ್ಟಾರೆ ಫಲಿತಾಂಶ 71.43ರಷ್ಟಿದೆ. ಪರೀಕ್ಷೆ-1ರಲ್ಲಿ 5,28,263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪರೀಕ್ಷೆ-2ರಲ್ಲಿ 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ 8,42,173 ವಿದ್ಯಾರ್ಥಗಳು ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದು, ಎರಡೂ ಪರೀಕ್ಷೆಗಳಲ್ಲಿ 6,15,933 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶೇ.27.11ರಷ್ಟು ಬಾಲಕರು ಹಾಗೂ ಶೇ.35.43ರಷ್ಟು ಬಾಲಕಿಯರು ಎಸೆಸೆಲ್ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.29.65ರಷ್ಟು ನಗರದ ವಿದ್ಯಾರ್ಥಿಗಳು ಹಾಗೂ ಶೇ.30.91ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2025ರಲ್ಲಿ ಪ್ರಥಮ ಬಾರಿಗೆ ಪರೀಕ್ಷೆಯನ್ನು ಬರೆದ ರೆಗ್ಯೂಲರ್ ವಿದ್ಯಾರ್ಥಿಗಳ ಫಲಿತಾಂಶವು ಶೇ.30.39ರಷ್ಟಿದೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿದವರ ಫಲಿತಾಂಶವು ಶೇ.56.14ರಷ್ಟಿದೆ.
ಸರಕಾರಿ ಶಾಲಾ ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿದ್ದು, ಶೇ.36ರಷ್ಟು ಸರಕಾರಿ ಶಾಲಾ ವಿದ್ಯಾರ್ಥಿಗಳು, ಶೇ.32ರಷ್ಟು ಖಾಸಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಶೇ.19.75ರಷ್ಟು ಅನುದಾನಿತ ಶಾಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮರು ಮೌಲ್ಯಮಾಪನ: ಜೂ.13ರಿಂದ ಜೂ.17ರವರಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಬಹುದು. ಜೂ.16ರಿಂದ ಜೂ.19ರವರೆಗೆ ಉತ್ತರ ಪತ್ರಿಕೆಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಎಸೆಸೆಲ್ಸಿ ಪರೀಕ್ಷೆ-3: 2025ರ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಎಸೆಸೆಲ್ಸಿ ಪರೀಕ್ಷೆ-3ರನ್ನು ಜು.5 ರಿಂದ ಜು.12ವರೆಗೆ ನಡೆಸಲಾಗುವುದು.
ನಾಲ್ವರು ವಿದ್ಯಾರ್ಥಿಗಳಿಗೆ ಗರಿಷ್ಟ ಅಂಕ: ಎಸೆಸೆಲ್ಸಿ ಪರೀಕ್ಷೆ-1ರಲ್ಲಿ 22 ಮಂದಿ 625ಕ್ಕೆ 625 ಅಂಕಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದರು. ಈಗ ಪರೀಕ್ಷೆ-2ರಲ್ಲಿ ನಾಲ್ವರು ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಲಕ್ಷ್ಮೀ ಬಿ. ಬಿದರಹಳ್ಳಿ, ಉಡುಪಿಯ ಎಸ್. ಶ್ರೀರಾಮ್ ಶೆಟ್ಟಿ, ಶಿವಮೊಗ್ಗದ ಸಂಜನಾ ಎಸ್, ತುಮಕೂರಿನ ಶಿವೆಂದು ಶ್ರೀಕಾರ್ ಎಸ್. ಪರೀಕ್ಷೆ-2ರಲ್ಲಿ 625 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ 2025ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 26 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.
‘2025ರ ಎಸೆಸೆಲ್ಸಿ ಪರೀಕ್ಷೆ-2ಯಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ. ಸರಕಾರಿ ಶಾಲೆಗಳ ಉತ್ತೀರ್ಣತಾ ಪ್ರಮಾಣ ಶೇ.36.65 ಇದ್ದು, ಇದು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಫಲಿತಾಂಶಕ್ಕಿಂತ ಹೆಚ್ಚಾಗಿದೆ. ಇದು ನಮ್ಮ ಸರಕಾರಿ ಶಾಲೆಗಳ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ’
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ







