ಕಾಲ್ತುಳಿತ | ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ಬಿಜೆಪಿ ದೂರು
ಪೊಲಿಟಿಕಲ್ ಕ್ರೆಡಿಟ್‍ಗಾಗಿ ಅಮಾಯಕರ ಕೊಲೆ : ಪಿ.ರಾಜೀವ್

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಬಿಜೆಪಿ ನಿಯೋಗವು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಈ ಪ್ರಕರಣದಲ್ಲಿ ಸಂಭವಿಸಿದ 11 ಮಂದಿಯ ಸಾವಿಗೆ ಮತ್ತು ಅದರ ಹಿಂದಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರೇ ನೇರ ಹೊಣೆಗಾರರು. ಆದ್ದರಿಂದ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
ಶುಕ್ರವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಆರ್‌ಸಿಬಿ ವಿಜಯೋತ್ಸವಕ್ಕೆ ಬಂದೋಬಸ್ತ್ ಮಾಡಲು ಕಾಲಾವಕಾಶಬೇಕೆಂದು ಪೊಲೀಸ್ ಇಲಾಖೆ ತಿಳಿಸಿದ್ದರೂ ಕಾರ್ಯಕ್ರಮ ನಡೆಸಿದ ಸರಕಾರದಿಂದ ಅಧಿಕಾರ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ತೆರಿಗೆ ಹಣವನ್ನು ವಿಜಯೋತ್ಸವಕ್ಕೆ ಖರ್ಚು ಮಾಡಲಾಗಿದೆ. ಹೆಚ್ಚು ಜನರು ಬರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕೊಟ್ಟರೂ, ನಡೆದು ಹೋಗಲಿ ಎಂಬ ಧೋರಣೆಯಿಂದಾಗಿ ಅನುಮತಿ ನೀಡಲು ಸೂಚಿಸಿದ್ದಾರೆ. ಲಕ್ಷಾಂತರ ಜನರು ಬಂದಾಗ ಆಗಬಹುದಾದ ಅನಾಹುತ- ಅವಘಡಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಸಾವಿರಾರು ಜನ ವೈದ್ಯರನ್ನು ಕರೆಸಬೇಕಿತ್ತು. ಆಮ್ಲಜನಕ, ಆಂಬುಲೆನ್ಸ್ ಇರಬೇಕಾಗಿತ್ತು. ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕಿತ್ತು ಎಂದು ಪಿ.ರಾಜೀವ್ ತಿಳಿಸಿದರು.
ಸರಕಾರ ಪೊಲಿಟಿಕಲ್ ಕ್ರೆಡಿಟ್‍ಗಾಗಿ ಅಮಾಯಕರ ಕೊಲೆ ಮಾಡಿದೆ. ಈ ಮಾನವ ಹತ್ಯೆಗೆ ಆರೋಪಿ ನಂಬರ್ 1 ಸಿದ್ದರಾಮಯ್ಯನವರೇ ಆಗಿದ್ದಾರೆ. ಆರೋಪಿ ನಂಬರ್ 2 ಡಿ.ಕೆ.ಶಿವಕುಮಾರ್. ಇವು ಇವರ ರಾಜಕೀಯ ತೆವಲಿಗಾಗಿ ನಡೆದ ಸಾವುಗಳು ಎಂದು ಪಿ.ರಾಜೀವ್ ಟೀಕಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ಈ ಪ್ರಕರಣದ ಹೊಣೆ ಹೊರಬೇಕು. ನೈತಿಕತೆ ಇದ್ದಲ್ಲಿ, ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಯಾವ ಸರಕಾರವಾದರೂ ಮೂರು ಮೂರು ತನಿಖೆ ಮಾಡಿಸಲು ಸಾಧ್ಯವೇ? ಡಿ.ಸಿ, ಸಿಐಡಿ ಮಾತ್ರವಲ್ಲದೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದಾರೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ನೈತಿಕತೆ ಎನ್ನುವ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆ ಎಂದು ಎನ್.ರವಿಕುಮಾರ್ ಒತ್ತಾಯಿಸಿದರು.







