ಕಾಲ್ತುಳಿತ ಪ್ರಕರಣ | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಬಿಜೆಪಿ ಆಗ್ರಹ

ಬಿ.ವೈ.ವಿಜಯೇಂದ್ರ
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಮಂದಿ ಸಾವನ್ನಪ್ಪಿರುವ ಘಟನೆ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವ ಜತೆಗೆ, ಮೃತರಿಗೆ ಕನಿಷ್ಠ ತಲಾ 50 ಲಕ್ಷ ಪರಿಹಾರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಈಚೆಗೆ ನಟ ಅಲ್ಲು ಅರ್ಜುನ್ ಅವರ ಸಿನಿಮಾ ಬಿಡುಗಡೆ ವೇಳೆ ತುಳಿತಕ್ಕೆ ಒಳಗಾಗಿ ಸಾವು ನೋವಾಗಿತ್ತು. ಅಲ್ಲಿ ಕೂಡ ಕಾಂಗ್ರೆಸ್ ಸರಕಾರ ಇತ್ತು. ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಇದೀಗ ಈ ದುರ್ಘಟನೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
ಒಬ್ಬ ಮ್ಯಾಜಿಸ್ಟ್ರೇಟ್ರಿಂದ ತನಿಖೆ ನಡೆದರೆ ಅಪರಾಧಿ ಸ್ಥಾನದಲ್ಲಿ ಇರುವ ಮುಖ್ಯಮಂತ್ರಿಗಳು, ಮಂತ್ರಿಮಂಡಲದ ಸದಸ್ಯರನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಅದು ಅಲ್ಲದೆ, ರಾಜ್ಯ ಸರಕಾರವು ಇಷ್ಟೊಂದು ಆತುರಾತುರವಾಗಿ ಈ ಸಂಭ್ರಮಾಚರಣೆಯನ್ನು ಯಾಕೆ ಆಯೋಜಿಸಿತ್ತು? ಬೇರೆ ಯಾರಾದರೂ ಆಯೋಜಿಸಿದ್ದರೆ ಸರಕಾರ ಅನುಮತಿ ಕೊಟ್ಟದ್ದೇಕೆ? ಪೂರ್ವತಯಾರಿ ಇಲ್ಲದೇ ನಿನ್ನೆಯೇ ಸಂಭ್ರಮಾಚರಣೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಕೇಳಿದರು.
ಸಾವಿನ ಸಂಖ್ಯೆ ಐದಾರರ ಕುರಿತ ಮಾಹಿತಿ ಬರುತ್ತಿದ್ದರೂ ಉಪ ಮುಖ್ಯಮಂತ್ರಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್ ಮುತ್ತಿಕ್ಕಿದ್ದರು. ವಿಧಾನಸೌಧದಲ್ಲಿ ಆಡಳಿತ ಪಕ್ಷದವರ ಸೆಲ್ಫಿಗಳ ಭರಾಟೆ ಮುಂದುವರೆದಿತ್ತು. ರಾಜ್ಯ ಸರಕಾರದ ಇಷ್ಟೊಂದು ಅಮಾನವೀಯ ನಡವಳಿಕೆ ಖಂಡನಾರ್ಹ ಎಂದು ವಿಜಯೇಂದ್ರ ಅವರು ಟೀಕಿಸಿದರು.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಸರಕಾರದ ಬೇಜವಾಬ್ದಾರಿಯಿಂದ 11 ಅಮಾಯಕರು ಪ್ರಾಣ ಕಳಕೊಂಡಿದ್ದಾರೆ. ಇದರ ಸಮರ್ಪಕ ತನಿಖೆ ಆಗಲೇಬೇಕಿದೆ. ರಾಜ್ಯ ಸರಕಾರ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.







