ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ : ಆರ್‌ಸಿಬಿ, ಕೆಎಸ್‍ಸಿಎ, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೀಯಲ್ ತನಿಖೆಯ ನೇತೃತ್ವ ವಹಿಸಿಕೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‍ಸಿಎ), ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವುದಾಗಿ ಪ್ರಕಟಿಸಿದ್ದಾರೆ.
ಗುರುವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರಕಾರದ ಆದೇಶದಂತೆ 15 ದಿನದೊಳಗೆ ಕೂಲಂಕಷವಾಗಿ ತನಿಖೆ ನಡೆಸಿ ವರದಿ ನೀಡಲು ಸರಕಾರ ಸೂಚನೆ ನೀಡಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಕಾರ್ಯನಿರತರಾಗಿದ್ದೇನೆ. ಕಾಲ್ತುಳಿತ ಉಂಟಾಗಿರುವ ಸ್ಥಳದ ಬಗ್ಗೆ ತಪಾಸಣೆ ನಡೆಸಲಾಗಿದೆ. ಜತೆಗೆ, ಸಿಸಿಟಿವಿ ದೃಶ್ಯಾವಳಿ ಪಡೆದು ಪರಿಶೀಲಿಸಲಾಗುವುದು ಎಂದರು.
ಘಟನೆಗೆ ಸಂಬಂಧಿಸಿದ ವಿಚಾರಣೆಗಾಗಿ ಕೆಎಸ್‍ಸಿಎ ಉನ್ನತ ಅಧಿಕಾರಿಗಳು, ಕ್ರೀಡಾಂಗಣದ ಭದ್ರತೆ ಹೊಣೆ ಹೊತ್ತಿದ್ದ ಡಿಎನ್‍ಎ ಇವೆಂಟ್ ಮ್ಯಾನೇಜ್‍ಮೆಂಟ್, ವಿಜಯೋತ್ಸವ ಆಯೋಜಕರಾಗಿದ್ದ ಆರ್‌ಸಿಬಿ ಫ್ರಾಂಚೈಸಿ ಹಾಗೂ ನಗರದ ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಲಾಗುವುದು ಎಂದು ಅವರು ಉಲ್ಲೇಖಿಸಿದರು.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಗಾಯಾಳುಗಳಿಗೆ ನೋಟಿಸ್ ನೀಡಿ ಅವರಿಂದ ಹೇಳಿಕೆ ಪಡೆಯಲಾಗುವುದು. ಜೂ.13ರ ಬೆಳಗ್ಗೆ 10.30ರಿಂದ 1.30ರ ವರೆಗೆ ಸಾರ್ವಜನಿಕರೂ ಬಂದು ತಮ್ಮ ಬಳಿಯಿರುವ ಸಾಕ್ಷ್ಯಗಳನ್ನು ನೀಡಿ ಹೇಳಿಕೆ ಕೊಡಲು ಅವಕಾಶ ಮಾಡಿಕೊಡಲಾಗುವುದು ಎಂದು ಜಿ. ಜಗದೀಶ್ ಹೇಳಿದರು.
ವಿಜಯೋತ್ಸವದಲ್ಲಿ ಭಾಗಿಯಾಗಲು ನಗರದ ವಿವಿಧ ಮೂಲೆಗಳಿಂದ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಮೆಟ್ರೊ ಮೂಲಕ ಬಂದಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಕೂಡಲೇ ಸಮನ್ವಯ ಸಾಧಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಬಹುದಾಗಿತ್ತು. ಈ ಬಗ್ಗೆ ಬಿಎಂಆರ್‍ಸಿಎಲ್ ಅಧಿಕಾರಿಗಳಿಂದಲೂ ಮಾಹಿತಿ ಪಡೆಯಲಾಗುವುದು ಎಂದು ಜಿ.ಜಗದೀಶ್ ತಿಳಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಎಲ್ಲ ಪ್ರವೇಶ ದ್ವಾರಗಳಿಗೆ ತೆರಳಿದ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ನೂಕುನುಗ್ಗಲು ವೇಳೆ ಗೇಟ್ ನಂಬರ್ 6ಎ ಬಳಿ ತಂತಿಬೇಲಿ ಮುರಿದಿರುವುದು, ಗೇಟ್ ನಂಬರ್ 8ರ ಬಳಿ ಕಾರಿನ ಗಾಜು ಒಡೆದು ಹಾನಿಯಾಗಿರುವುದನ್ನು ವೀಕ್ಷಿಸಿದರು.







