ʼಕಾಲ್ತುಳಿತ ಪ್ರಕರಣʼ ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿರುವುದು ದೃಢ?

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ತನಿಖೆಗೆ ಬಯಲಾಗಿದೆ.
ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿರುವ 11 ಮಂದಿಯ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೃತರ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟಿರುವವರ ಪೈಕಿ ಬಹುತೇಕರು ಉಸಿರುಗಟ್ಟಿ, ಎದೆಯ ಭಾಗದಲ್ಲಿನ ಹೆಚ್ಚು ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕೆಲವರಿಗೆ ಮೂಳೆಗಳು ಮುರಿದಿರುವುದನ್ನು ಹೊರತುಪಡಿಸಿದರೆ, ಇತರೆ ಯಾವುದೇ ಅಂಶಗಳು ಕಂಡು ಬಂದಿಲ್ಲ. ಇಲ್ಲಿನ ಬೌರಿಂಗ್ ಆಸ್ಪತ್ರೆಯಲ್ಲಿ ದಿವ್ಯಾಂಶಿ, ಅಕ್ಷತಾ, ಸಿವಲಿಂಗ, ಮನೋಜ್, ದೇವಿ ಹಾಗೂ ಶ್ರವಣ್ ಅವರ ಮೃತದೇಹಗಳು ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೂರ್ಣಚಂದ್ರ, ಭೂಮಿಕ್, ಪ್ರಜ್ವಲ್, ಚಿನ್ಮಯಿ ಶೆಟ್ಟಿ ಹಾಗೂ ಸಹನಾ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಮೃತದೇಹಗಳನ್ನು ಕುಟುಂಬಸ್ಥರು ತಮ್ಮ ನಿವಾಸಗಳಿಗೆ ಕೊಂಡೊಯ್ದುರು. ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮೃತರ ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. ಕಾಲ್ತುಳಿತದಲ್ಲಿ ಗಾಯಗೊಂಡಿರುವ 40ಕ್ಕೂ ಅಧಿಕ ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.







