ಕಾಲ್ತುಳಿತ ಪ್ರಕರಣ | ಬಿ.ದಯಾನಂದ್ ಸೇರಿ ನಾಲ್ವರು ಅಧಿಕಾರಿಗಳ ಅಮಾನತು ಹಿಂಪಡೆದ ಸರಕಾರ

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತ ದುರಂತ ಸಂಬಂಧ ಕರ್ತವ್ಯಲೋಪದ ಆರೋಪದಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರಕಾರ ಸೋಮವಾರ ಹಿಂಪಡೆದುಕೊಂಡಿದೆ.
ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಹೊರತು ಪಡಿಸಿ ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್, ಶೇಖರ್ ಎಚ್. ತೆಕ್ಕಣ್ಣವರ್, ಡಿವೈಎಸ್ಪಿ ಸಿ.ಬಾಲಕೃಷ್ಣ ಹಾಗೂ ಪೊಲೀಸ್ ಇನ್‍ಸ್ಪೆಕ್ಟರ್ ಎ.ಕೆ.ಗಿರೀಶ್ ಅವರ ಅಮಾನತು ಆದೇಶವನ್ನು ಸರಕಾರ ಹಿಂಪಡೆದುಕೊಂಡಿರುವುದಾಗಿ ತಿಳಿಸಿದೆ.
ಒಟ್ಟಾರೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಆದರೆ, ವಿಕಾಸ್ ಕುಮಾರ್ ವಿಕಾಸ್ ಅವರು ಸರಕಾರದ ಅಮಾನತು ಆದೇಶ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮೊರೆ ಹೋಗಿದ್ದರು. ಬಳಿಕ ಸಿಎಟಿ ಸರಕಾರದ ಆದೇಶಕ್ಕೆ ತಡೆ ನೀಡಿತ್ತು. ಬಳಿಕ ಸಿಎಟಿ ಆದೇಶ ಪ್ರಶ್ನಿಸಿ ಸರಕಾರ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಸದ್ಯ ಹೈಕೋರ್ಟ್‍ನಲ್ಲಿ ಸರಕಾರದ ಮೇಲ್ಮನವಿ ಅರ್ಜಿ ವಿಚಾರಣೆ ಹಂತದಲ್ಲಿರುವುದರಿಂದ ಅವರ ಅಮಾನತು ಮುಂದುವರೆದಿದೆ.
ಎರಡು ಸಂಸ್ಥೆಗಳು ನಡೆಸಿದ್ದ ತನಿಖೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಹಾಗೂ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆದಿದ್ದು, ಎರಡು ತನಿಖಾ ಸಂಸ್ಥೆಗಳು ಕಾಲ್ತುಳಿತದ ಬಗ್ಗೆ ಸರಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸಿದ್ದವು. ಈ ಎರಡು ಸಂಸ್ಥೆಗಳು ನೀಡಿದ್ದ ವರದಿ ಅನ್ವಯ ಸರಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ನಿಯಾಮವಳಿ ಪ್ರಕಾರ ಅಮಾನತು ಆದೇಶ ರದ್ದುಗೊಳಿಸಿ ನಾಲ್ವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ಹೊರಡಿಸಿದೆ.







