ಕಾಲ್ತುಳಿತ ಪ್ರಕರಣ | ಬಿ.ದಯಾನಂದ್ ಸಹಿತ ಮೂವರು ಅಧಿಕಾರಿಗಳ ಅಮಾನತು ಆದೇಶ ಅನುಮೋದಿಸಿದ ಕೇಂದ್ರ

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ
ಬೆಂಗಳೂರು: ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ನಗರ ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಹಿತ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರಕಾರ ಅನುಮೋದಿಸಿದೆ.
ಜೂ.4ರಂದು ನಡೆದ ಆರ್ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿದ್ದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರಕಾರ ಮೂವರು ಐಪಿಎಸ್ ಅಧಿಕಾರಿಗಳಾದ ಬಿ.ದಯಾನಂದ್, ವಿಕಾಸ್ ಕುಮಾರ್ ವಿಕಾಸ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು.
ಇದೀಗ ರಾಜ್ಯ ಸರಕಾರದ ವರದಿಯನ್ನು ಔಪಚಾರಿಕವಾಗಿ ಅಂಗೀಕರಿಸಿರುವ ಕೇಂದ್ರ ಸರಕಾರವು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ(ಡಿಪಿಎಆರ್) ತನ್ನ ಅನುಮೋದನೆಯನ್ನು ತಿಳಿಸಿದ್ದು, ಇದರಿಂದಾಗಿ ರಾಜ್ಯ ಸರಕಾರ ತೆಗೆದುಕೊಂಡ ಕ್ರಮವನ್ನು ಬಲಪಡಿಸಿದಂತಾಗಿದೆ.
ಅಲ್ಲದೆ, ಶಿಸ್ತು ಪ್ರಕ್ರಿಯೆಯನ್ನು ಮತ್ತಷ್ಟು ಮುಂದುವರೆಸುವ ಮೂಲಕ ಅಧಿಕಾರಿಗಳ ವಿರುದ್ಧ 30 ದಿನಗಳಲ್ಲಿ ಚಾರ್ಜ್ಶೀಟ್ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಕೇಂದ್ರವು ಸೂಚಿಸಿರುವುದಾಗಿ ತಿಳಿದುಬಂದಿದೆ.





