ಬೆಂಗಳೂರು ಕಾಲ್ತುಳಿತ ಪ್ರಕರಣ: ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

File Photo: PTI
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ವಿಚಾರಣಾ ಆಯೋಗದ ವರದಿ ರದ್ದು ಕೋರಿ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ಸ್ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಆರ್ಸಿಬಿ ವಿಜಯೋತ್ಸವ ಸಮಾರಂಭ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ಸ್ನ ನಿರ್ದೇಶಕ ಸುನಿಲ್ ಮ್ಯಾಥ್ಯೂ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾ. ಕುನ್ಹಾ ಅವರ ಆಯೋಗವು ನಮ್ಮ ವಾದ ಆಲಿಸದೆ ಮತ್ತು ಪ್ರಕರಣದ ಸಾಕ್ಷಿಗಳ ಪಾಟಿ ಸವಾಲು ನಡೆಸಲು ನಮಗೆ ಅವಕಾಶ ನೀಡದೆ ಏಪಕ್ಷೀಯವಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯ ಪ್ರತಿಯನ್ನು ನಮಗೆ ನೀಡಿಲ್ಲ. ಆದರೆ, ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಂದ ನಮ್ಮ ಕಕ್ಷಿದಾರರ ಘನತೆಗೆ ಧಕ್ಕೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಕ್ರಿಮಿನಲ್ಗಳೇನಲ್ಲ. ವರದಿಯಲ್ಲಿನ ಅಭಿಪ್ರಾಯ ಆಘಾತಕಾರಿಯಾಗಿವೆ ಎಂದು ನುಡಿಯಿತು. ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್, ಸದ್ಯಕ್ಕೆ ನ್ಯಾ. ಜಾನ್ ಮೈಕೆಲ್ ಕುನ್ಹಾ ವರದಿ ಬಹಿರಂಗಪಡಿಸುವುದಿಲ್ಲ. ಆದ್ದರಿಂದ, ವರದಿ ಬಗ್ಗೆ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ನ್ಯಾ.ಕುನ್ಹಾ ವರದಿಗೆ ತಡೆಯಾಜ್ಞೆ ನೀಡಬೇಕು, ತನಿಖೆ ಆಧರಿಸಿ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ತಿಳಿಸಿತಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.







