ಕಾಲ್ತುಳಿತ ಪ್ರಕರಣ | ಬಿಡುಗಡೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.11ಕ್ಕೆ ಮುಂದೂಡಿಕೆ

ಹೈಕೋರ್ಟ್
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳ ಸಾವು ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಾಳೆ (ಜೂ.11ಕ್ಕೆ) ಮುಂದೂಡಿದೆ.
ಬಂಧನ ಕಾನೂನುಬಾಹಿರವೆಂದು ಬಿಡುಗಡೆ ಕೋರಿ ಅನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್, ಶಮಂತ್ ಮಾವಿನಕೆರೆ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು, ಬಂಧನ ಕಾನೂನುಬಾಹಿರವೆಂದಾದರೆ 1 ಕ್ಷಣವೂ ಜೈಲಿನಲ್ಲಿಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ನ ತೀರ್ಪು ಉಲ್ಲೇಖಿಸಿದರು. ಅಲ್ಲದೆ, ಸಿಸಿಬಿ ಪ್ರತ್ಯೇಕ ತನಿಖಾ ಸಂಸ್ಥೆ ಸಿಐಡಿ ವ್ಯಾಪ್ತಿಗೆ ಬರುವುದಿಲ್ಲ. ಸಿಐಡಿಗೆ ವಹಿಸಿದ ಮೇಲೆ ಸಿಸಿಬಿ ಬಂಧಿಸಿರುವುದೇ ಕಾನೂನುಬಾಹಿರ. ಸರ್ಕಾರ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿದೆ. ರಾಜಕೀಯ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೈಬಿಟ್ಟಿದೆ. ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ವರ್ಗಾಯಿಸಿದೆ. ಅವರು ತಪ್ಪು ಮಾಡಿದ್ದಾರೆಂದಾದರೆ ಏಕೆ ಬಂಧಿಸಿಲ್ಲ. ಆರ್ ಸಿಬಿ, ಡಿಎನ್ ಎ ಸಂಸ್ಥೆಗೆ ಸೇರಿದವರನ್ನು ಮಾತ್ರ ಬಂಧಿಸಿದ್ದೇಕೆ ? ಗಂಭೀರ ಅಪರಾಧದ ಕೇಸ್ ಗಳನ್ನು ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.
ಬಳಿಕ ಸರ್ಕಾರದ ಪರ ಹೆಚ್ಚುವರಿ ಎಸ್ಪಿಪಿ ಬಿ.ಎನ್. ಜಗದೀಶ್ ಅವರು, ಸರ್ಕಾರದ ಪರ ವಾದಮಂಡನೆಗೆ ನಾಳೆ ಬೆಳಗ್ಗಿನವರೆಗೂ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ವಿಚಾರಣೆಯನ್ನು ಜೂ.11ರ ಬೆಳಗ್ಗೆ 10.30ಕ್ಕೆ ಮುಂದೂಡಿದೆ.