ಕಾಲ್ತುಳಿತ ಪ್ರಕರಣ: ಆರ್ಸಿಬಿ ಸಿಬ್ಬಂದಿ ಸಹಿತ ಮೂವರ ಬಂಧನ, ಮತ್ತೊಬ್ಬ ವಶಕ್ಕೆ

PC: x.com/DeeptiNandanRdy
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಆರ್ಸಿಬಿ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗ ನಿಖಿಲ್ ಸೋಸಲೆ ಹಾಗೂ ಡಿಎನ್ಎ ಈವೆಂಟ್ ಮ್ಯಾನೇಜ್ಮೆಂಟ್ನ ಕಿರಣ್ ಹಾಗೂ ಸುನಿಲ್ ಮ್ಯಾಥ್ಯೂ ಬಂಧಿತರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿದೆ.
ಮೂವರನ್ನು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಶೇಷಾದ್ರಿಪುರ ಎಸಿಪಿ ಪ್ರಕಾಶ್ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈ ಮೂವರೂ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರ್ಸಿಬಿ ಫ್ರಾಂಚೈಸಿ, ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ.





