ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ | ಘಟನೆಯ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ತಾಕೀತು
ತನಿಖೆಯ ಹೊಣೆ ಸಿಐಡಿಗೆ; ಹೈಕೋರ್ಟ್‌ಗೆ ಸರಕಾರ ಮಾಹಿತಿ

ಬೆಂಗಳೂರು: ಆರ್.ಸಿ.ಬಿ. ಮೊದಲ ಬಾರಿ ಐಪಿಎಲ್ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ದಾಖಲಿಸಿಕೊಂಡಿದೆ.
ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ, ದಾವೆಯ ವಿಚಾರಣೆ ನಡೆಸಿತು.
ಈ ವೇಳೆ ಸರಕಾರದ ಪರ ಎ.ಜಿ. ಶಶಿ ಕಿರಣ್ ಶೆಟ್ಟಿ ವಾದ ಮಂಡಿಸಿ, ಹೈಕೋರ್ಟ್ ನೀಡುವ ಸಲಹೆಗಳನ್ನು ಪಾಲಿಸಲು ಸರಕಾರ ಬದ್ದವಾಗಿದೆ. ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತಿರೋಧಿಸುವುದಿಲ್ಲ ಎಂದರು.
ಮುಂದುವರಿದು, ಎರಡೂವರೆ ಲಕ್ಷ ಜನರು ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. 11 ಮಂದಿ ಸಾವನ್ನಪಿದ್ದು, 56 ಮಂದಿ ಗಾಯಗೊಂಡಿದ್ದರು. ಹಲವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. 15 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
1643 ಪೊಲೀಸ್ ಸಿಬ್ಬಂದಿಗಳನ್ನು ಬಂದೋಸ್ತ್‌ಗೆ ನೇಮಿಸಿತ್ತು. 5 ಮಹಿಳೆಯರು 6 ಪುರುಷರು ಮೃತಪಟ್ಟಿದ್ದಾರೆ. ಕೋಲಾರ, ಉತ್ತರ ಕನ್ನಡ, ತುಮಕೂರು, ಯಾದಗಿರಿ, ಮಂಡ್ಯದಿಂದಲೂ ಜನ ಬಂದಿದ್ದರು. ಒಟ್ಟಾರೆ 2.5 ಲಕ್ಷ ಜನರು ನಿನ್ನೆ ಬಂದಿದ್ದರು ಎಂದು ಅವರು ಹೇಳಿದರು.
ಈ ವೇಳೆ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರು, ಇಂತಹ ಘಟನೆ ತಡೆಗೆ ಎಸ್‌ಒಪಿ, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.
ಕಾಲ್ತುಳಿತವಾದಾಗ ಏನು ಮಾಡಬೇಕೆಂಬ ಬಗ್ಗೆ ಸಿದ್ದತೆ ಇರಬೇಕಲ್ಲವೇ? ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಲ್ಲವೇ.? ಇಂತಹ ಮಾರ್ಗಸೂಚಿ ಏನಾದರೂ ಪಾಲಿಸಿದ್ದೀರಾ? ಸರಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿತು.
34,600 ಜನರಿಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವ್ಯವಸ್ಥೆ ಇದೆ. 33 ಸಾವಿರ ಜನರಿಗಷ್ಟೇ ಟಿಕೆಟ್ ನೀಡುತ್ತಾರೆ. ಆದರೆ ನಿನ್ನೆ ಎರಡೂವರೆ ಲಕ್ಷ ಜನರು ಬಂದಿದ್ದರು ಎಂದು ಎಜಿ ಶಶಿ ಕಿರಣ್ ಶೆಟ್ಟಿ ತಿಳಿಸಿದರು.
ಇಂತಹ ದೊಡ್ಡ ಕಾರ್ಯಕ್ರಮ ನಡೆದಾಗ ಪೂರ್ವ ಸಿದ್ದತೆ ಏನಿತ್ತು ಎಂದು ಹೈಕೋರ್ಟ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಜಿ ಶಶಿ ಕಿರಣ್ ಶೆಟ್ಟಿ, ರಾಯಲ್ ಚಾಲೆಂಚರ್ಸ್ ಪ್ರಾಂಚೈಸಿ ಟಿಕೆಟ್ ಹಂಚಿಕೆ ಮಾಡುತ್ತದೆ. ಸ್ಟೇಡಿಯಂನ ಎಲ್ಲ ವ್ಯವಸ್ಥೆ ಅವರೇ ಮಾಡುತ್ತಾರೆ ಎಂದರು.
ಇದೇ ವೇಳೆ ಕಾಲ್ತುಳಿತ ಸಂಭವಿಸಿದ ಸ್ಥಳದ ವಿವರದ ಮ್ಯಾಪ್ ಹೈಕೋರ್ಟ್‌ಗೆ ಸಲ್ಲಿಸಲಾಯಿತು.
ಕಾರ್ಯಕ್ರಮ ಆಯೋಜಕರು ಯಾರೆಂಬ ಬಗ್ಗೆ ಹೈಕೋರ್ಟ್ ಪ್ರಶ್ನೆಗೆ, ಆರ್‌ಸಿಬಿ ವ್ಯವಸ್ಥೆ ಮಾಡುತ್ತದೆ, ಕೆಎಸ್‌ಸಿಎ ಸಹಯೋಗ ನೀಡುತ್ತದೆ ಎಂದು ಸರಕಾರದ ಪರ ವಕೀಲರು ಮಾಹಿತಿ ನೀಡಿದರು.
ಸ್ಟೇಡಿಯಂಗೆ ಎಷ್ಟು ಗೇಟ್‌ಗಳಿವೆ, ಎಷ್ಟು ತೆರೆದಿತ್ತು ಎಂಬ ಹೈಕೋರ್ಟ್ ಪ್ರಶ್ನಗೆ, ಸ್ಟೇಡಿಯಂಗೆ 21 ಗೇಟ್‌ಗಳಿವೆ, ಎಲ್ಲ ತೆರೆದಿತ್ತೆಂಬ ಮಾಹಿತಿಯಿದೆ. 2 ಲಕ್ಷ ಜನರು ಸ್ಟೇಡಿಯಂ ಸುತ್ತಲೇ ಇದ್ದರು. ಸರಕಾರ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನ ಬಂದಿದ್ದರು. ಬೆಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರೂ ಪರಿಶೀಲಿಸುತ್ತಿದ್ದರು ಎಂದು ಎ.ಜಿ.ಶಶಿ ಕಿರಣ್ ಶೆಟ್ಟಿ ಸ್ಪಷ್ಟಪಡಿಸಿದರು.
ಈ ವೇಳೆ ವಕೀಲ ಜಿ.ಆರ್.ಮೋಹನ್, ಕೇವಲ 3 ಗೇಟ್ ಮಾತ್ರ ತೆರೆದಿತ್ತು ಎಂದರು.
ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ, ತನಿಖೆಯ ನಂತರ ಸಂಪೂರ್ಣ ಸತ್ಯ ಹೊರಬರಲಿದೆ ಎಂದು ಎ.ಜಿ. ಶಶಿ ಕಿರಣ್ ಶೆಟ್ಟಿ ತಿಳಿಸಿದರು.
ಆರ್‌ಸಿಬಿ ಆಟಗಾರರು ರಾಜ್ಯಕ್ಕೆ, ದೇಶಕ್ಕೆ ಆಡುತ್ತಿಲ್ಲ. ರಾಜ್ಯ ಸರಕಾರ ಇವರನ್ನು ಗೌರವಿಸುವ ಅಗತ್ಯವಿರಲಿಲ್ಲ. ವಿಧಾನಸೌಧ, ಚಿನ್ನಸ್ವಾಮಿ ಎರಡೂ ಕಡೆ ಕಾರ್ಯಕ್ರಮ. ಇದರಿಂದ ಸಮಸ್ಯೆಯಾಗಿದೆ ಎಂದು ವಕೀಲ ಹೇಮಂತ್ ರಾಜ್ ಹೇಳಿಕೆ ನೀಡಿದರು.
ಎರಡೂ ಕಡೆ ಸಮಾರಂಭ ಮಾಡಿದ್ದಾರೆ. ಎಲ್ಲೆಲ್ಲಿ ಆಂಬುಲೆನ್ಸ್ ಇತ್ತು, ಎಷ್ಟು ಭದ್ರತೆ ಇತ್ತು. ಸರಕಾರ ಇದನ್ನು ಸ್ಪಷ್ಟಪಡಿಸಬೇಕು, ತನಿಖೆ ನಡೆಸಬೇಕು ಎಂದು ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದರು.
75 ಜನರು ಗಾಯಗೊಂಡಿದ್ದರೆಂದು ವರದಿಗಳಿವೆ. ಗೆಲುವು ಸಂಭ್ರಮಿಸುವಾಗ ಈ ಘಟನೆಯಾಗಿದೆ. ಇಂತಹ ಅವಘಡವಾಗಲು ಕಾರಣಗಳೇನು? ಮುಂದೆ ಇಂತಹ ಘಟನೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳೇನು? ಈ ಎಲ್ಲದರ ಬಗ್ಗೆ ಸರಕಾರ ವರದಿ ನೀಡಬೇಕಿದೆ. ಹಲವು ಜನರಿಂದ ಹೈಕೋರ್ಟ್‌ಗೆ ಮನವಿಗಳು ಬಂದಿವೆ. ಬೆಳಗ್ಗೆ 10.30ಕ್ಕೆ ಕೋರ್ಟ್ಗೆ ಬರುವಂತೆ ಎಜಿಗೆ ತಿಳಿಸಿದ್ದೆವು. ಹೈಕೋರ್ಟ್ ಸೂಚನೆಯಂತೆ ವರದಿ ಸಲ್ಲಿಸಿದ್ದಾರೆ ಎಂದು ಹೈಕೋರ್ಟ್ ತಿಳಿಸಿದ್ದು, ಕೊನೆಗೆ ಘಟನೆಯ ಬಗ್ಗೆ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆ ಜೂನ್ 10ಕ್ಕೆ ಮುಂದೂಡಿತು.
ತನಿಖೆ ಸಿಐಡಿ ಹೆಗಲಿಗೆ :
ಕಾಲ್ತುಳಿತದಿಂದ 11 ಜನರ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ವಿಭಾಗೀಯ ಪೀಠಕ್ಕೆ ಸರಕಾರರದಿಂದ ತನಿಖಾ ಪ್ರಗತಿ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಎಫ್ಐಆರ್ ದಾಖಲಿಸಿರುವ ಬಗ್ಗೆ ಮಾಹಿತಿ ನೀಡಿರುವ ಸರಕಾರ ತನಿಖೆ ಹೊಣೆ ಸಿಐಡಿಗೆ ನೀಡಿರುವುದಾಗಿ ಮಾಹಿತಿ ನೀಡಿದೆ.







