ವಿಧಾನ ಪರಿಷತ್ ಚುನಾವಣೆ | ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪ್ರಮುಖ ಕಾರಣ: ಬಿಜೆಪಿ ನಾಯಕ ಡಿ.ವಿ.ಸದಾನಂದಗೌಡ

ಡಿ.ವಿ.ಸದಾನಂದ ಗೌಡ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ‘ಅಡ್ಡ ಮತದಾನ’ದ ಕುರಿತು ಆಣೆ-ಪ್ರಮಾಣದ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಬಿಜೆಪಿ ಹಿರಿಯ ಮುಖಂಡ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ತಮ್ಮ ಆಪ್ತರೊಬ್ಬರ ಜೊತೆಗೆ ನಡೆಸಿದ ಸಂವಾದವು ಕುತೂಹಲಕ್ಕೆ ಕಾರಣವಾಗಿದೆ.
‘ಪಕ್ಷದ ರಾಜ್ಯ ನಾಯಕರ ಉದಾಸೀನತೆಯೇ ಕಾಂಗ್ರೆಸ್ನ ಐದನೇ ಅಭ್ಯರ್ಥಿ ಗೆಲುವಿಗೆ ಪ್ರಮುಖ ಕಾರಣ. ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಾವು(ಬಿಜೆಪಿ) ಎಚ್ಚೆತ್ತುಕೊಳ್ಳಬೇಕಿತ್ತು’ ಎಂದು ಸದಾನಂದ ಗೌಡ ಅವರು, ಬಿಜೆಪಿಯ ಮುಖಂಡರೊಂದಿಗೆ ನಡೆಸಿದ ಸಂಭಾಷಣೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಜೂ.13ರಂದು ಹೆಬ್ಬಾಳದ ಅಪಾರ್ಟ್ಮೆಂಟ್ನಿಂದ ನನಗೆ ಕರೆಯೊಂದು ಬಂದಿತ್ತು. ಕಾಂಗ್ರೆಸ್ ಪಕ್ಷದ ನಾಲ್ಕು ಪ್ರಮುಖ ನಾಯಕರು ಮತ್ತು ಬಿಜೆಪಿಯ ಕೆಲ ಶಾಸಕರು ಅಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ಆ ವ್ಯಕ್ತಿ ಮಾಹಿತಿ ನೀಡಿದ್ದರು. ನಾನು ತಕ್ಷಣವೇ ಪಕ್ಷದ ರಾಜ್ಯಾಧ್ಯಕ್ಷರಿಗೆ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ಗೆ ಕರೆ ಮಾಡಿದೆ. ಆದರೆ ಇಬ್ಬರೂ ಸಿಗಲಿಲ್ಲ. ತಕ್ಷಣವೇ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ‘ಸರಿ ನೋಡ್ತೇನೆ' ಎಂದರು. ಆದರೆ, ಮರುದಿನ ಅದೇ ಅಪಾರ್ಟ್ಮೆಂಟ್ ಪಕ್ಕದ ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ ಎರಡನೇ ಸಭೆಯೂ ನಡೆಯಿತು. ಆಗಲೂ ನಾನು ಅದೇ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ ಎಚ್ಚರಿಸಿದೆ. ಆದರೆ ನಮ್ಮವರು(ಬಿಜೆಪಿಯವರು) ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸದಾನಂದಗೌಡ ಹೇಳಿದ್ದಾರೆ ಎನ್ನಲಾಗಿದೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದು ಪಕ್ಷಕ್ಕೆ ಮುಖಭಂಗವಾದ ಮೇಲೆ ಅದೇ ಪ್ರಧಾನ ಕಾರ್ಯದರ್ಶಿ, ಡಿ.ವಿ.ಸದಾನಂದಗೌಡರಿಗೆ ಕರೆ ಮಾಡಿ, ‘ಅಣ್ಣ ನೀವು ಹೇಳಿದ ಹಾಗೆಯೇ ಆಯ್ತಲ್ಲ..' ಎಂದಿದ್ದರು. ಅದಕ್ಕೆ ಸದಾನಂದ ಗೌಡ, ‘ಹೊಳೆ ದಾಟಿದ ಮೇಲೆ ಮತ್ತೇನು ಚರ್ಚೆ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಆಣೆ-ಪ್ರಮಾಣದ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸದಾನಂದಗೌಡ, ‘ಅಡ್ಡ ಮತದಾನದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪಕ್ಷದ ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಧರ್ಮಸ್ಥಳದ ಶ್ರೀ ಕ್ಷೇತ್ರವನ್ನು ರಾಜಕೀಯ ವಿಚಾರವನ್ನು ತೆಗೆದುಕೊಂಡು ಹೋಗುವುದು ಬೇಡ. ನಮ್ಮಿಂದ ರಾಜಕೀಯ ಮಾಡಲು ಆಗದಿದ್ದರೆ ಎಲ್ಲವನ್ನು ದೇವರಿಗೆ ಬಿಟ್ಟುಬಿಡೋಣ ಎಂದು ತಿಳಿಸಿದ್ದೇನೆ’ ಎಂದರು.






