ಮಾ.6ರಂದು ರಾಜ್ಯ ಬಜೆಟ್ ಮಂಡನೆ : ಸಚಿವ ಸಂಪುಟ ನಿರ್ಣಯ

ಬೆಂಗಳೂರು : ರಾಜ್ಯ ಬಜೆಟ್ ಅನ್ನು ಮಾ.6ರಂದು ಮಂಡನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.6 ರಿಂದ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಮುಖ್ಯಮಂತ್ರಿ ಮಾ.6ರಂದು ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಿಂದ ಬೀದರ್, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿನ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಎಚ್‍ಪಿವಿ ಲಸಿಕೆಯನ್ನು ನೀಡಲು 15.34 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 43 ಹೊಸ ಕಾಮಗಾರಿಗಳನ್ನು 71.41 ಕೋಟಿ ರೂ.ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಜ.7ರಂದು ಹೊರಡಿಸಿರುವ ಸರಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು 11.12 ಕೋಟಿ ರೂ.ಅಂದಾಜು ಮೊತ್ತದಲ್ಲಿ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ತೊರವಿ ಗ್ರಾಮದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ಅನುಷ್ಠಾನಗೊಳಿಸುವ ಹಾಲಿ ಶೀತಲಗೃಹಕ್ಕೆ 12.40 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ಮೂಲಕ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 2000 ಮೆ.ಟನ್ ಸಾಮರ್ಥ್ಯದ ಶೀತಲಗೃಹವನ್ನು 10.32 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಬಾರ್ಡ್ ಆರ್ಥಿಕ ನೆರವಿನೊಂದಿಗೆ ನಿರ್ಮಾಣ ಮಾಡಲು ಹಾಗೂ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ‘ಸ್ಕಿಲ್ ಲ್ಯಾಬ್, ಸಿಮುಲೇಷನ್ ಸೆಂಟರ್ ಅಂಡ್ ಇನ್ನೊವೇಶನ್ ಇನ್ಕ್ಯೂಬೇಷನ್ ಕೇಂದ್ರ’ವನ್ನು 41.16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಟಿಬಿ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ 200 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯನ್ನು 330.59 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ಹಾಗೂ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದೊಂದಿಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸರಕಾರದ ಸಭೆ ಮತ್ತು ಸಮಾರಂಭಗಳಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಅನುಸರಿಸಬೇಕಾದ ಶಿಷ್ಠಾಚಾರದ ಕುರಿತು ಫೆ.6ರಂದು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆಗೆ ಘಟನೋತ್ತರ ಅನುಮೋದನೆ ಹಾಗೂ ರಾಜ್ಯ ಸರಕಾರದ ಅನುದಾನದಿಂದ ನಿರ್ಮಿಸಲಾಗುವ ಕರ್ನಾಟಕ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ಕಟ್ಟಡಗಳ ಉದ್ಘಾಟನಾ ಸಮಾರಂಭಗಳಲ್ಲಿ ಶಿಷ್ಠಾಚಾರದ ಕುರಿತು ಮಾರ್ಗಸೂಚಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪ ಖನಿಜವನ್ನು ತೆಗೆದು ರಾಜಧನವನ್ನು ಪಾವತಿಸದೆ. ಸಾಗಾಣಿಕೆ ಮಾಡಿರುವ ಹಾಗೂ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತೆ ಒತ್ತುವರಿ ಮಾಡಿರುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು ಒನ್ ಟೈಮ್ ಸೆಟಲ್ಮೆಂಟ್(ಓಟಿಎಸ್) ಯೋಜನೆ ಮೂಲಕ ವಸೂಲಿ ಮಾಡಲು, ರಾಜ್ಯ ಉಪ ಖನಿಜ ರಿಯಾಯಿತಿ ನಿಯಮಗಳು-1994ಕ್ಕೆ ತಿದ್ದುಪಡಿ ಮಾಡಲು ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವ್ಯಾಪ್ತಿಯೊಳಗಿನ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಾದ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಎಂ.ಎಸ್.ರಾಮಯ್ಯ, ಕಿಮ್ಸ್ ಹಾಗೂ ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸರಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ 2ಎ ಚಿಕಿತ್ಸಾ ವಿಧಾನಗಳಿಗೆ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1777 ಎಕರೆ ಭೂಮಿಯನ್ನು ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಿರುವುದನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
2021 ರಿಂದ 2025ರವರೆಗೆ ಸ್ಥಾಪಿಸಲಾದ ಒಟ್ಟು 148 ಬಿಪಿಎಚ್‍ಯು(ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಘಟಕಗಳು) ಪುನರಾವರ್ತಿತ ವೆಚ್ಚಗಳೊಂದಿಗೆ 50 ಬಿಪಿಎಚ್‍ಯುಗಳನ್ನು ಸ್ಥಾಪಿಸಲು ಪ್ರಯೋಗಾಲಯ ಉಪಕರಣಗಳು, ಐಸಿಟಿ ಘಟಕ ಮತ್ತು ಪೀಠೋಪಕರಣಗಳ ಖರೀದಿಗೆ 15ನೆ ಹಣಕಾಸು ಆಯೋಗದ ಅನುದಾನ 22.37 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಶಾಲೆಗಳಲ್ಲಿ 1 ರಿಂದ 10ನೆ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು 2 ಜೊತೆ ಸಾಕ್ಸ್ ಗಳನ್ನು ವಿದ್ಯಾ ವಿಕಾಸ ಯೋಜನೆಯಡಿ ಅಂದಾಜು 104 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲು ನಿರ್ಧಾರ :
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರಿಗಾಗಿ ಶಕ್ತಿ ಯೋಜನೆಯಡಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಉಚಿತವಾಗಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಂಪುಟ ಸಭೆಯಲ್ಲಿ ‘ಎಸ್‍ಐಆರ್’ ಕುರಿತು ಚರ್ಚೆ
ಎಸ್‍ಐಆರ್ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚೆ ನಡೆಸಲಾಗಿದೆ. ಎಸ್‍ಐಆರ್ ಯಾವ ರೀತಿ ನಡೆಯಲಿದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಕೆಲವು ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಸಚಿವ ಸಂಪುಟವು ಕಾನೂನು ಇಲಾಖೆಗೆ ಈ ವಿಷಯವಾಗಿ ವಿವರವಾಗಿ ಅಧ್ಯಯನ ನಡೆಸಿ, ಸಂಪುಟದ ಮುಂದೆ ವರದಿ ಮಂಡಿಸಲು ಸೂಚಿಸಿದೆ. ಕಾನೂನು ಇಲಾಖೆ ನೀಡುವಂತಹ ವರದಿಯನ್ನು ಆಧರಿಸಿ ಸರಕಾರ ಮುಂದಿನ ನಡೆಯನ್ನು ನಿರ್ಧರಿಸಲಿದೆ.
ಎಚ್.ಕೆ.ಪಾಟೀಲ್, ಕಾನೂನು ಸಚಿವ






