ಆದರ್ಶ ವಿದ್ಯಾಲಯ-ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆ: ಸಂಪುಟ ಸಭೆ ಒಪ್ಪಿಗೆ
106 ತಾಲೂಕುಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನ

ಬೆಂಗಳೂರು: ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರಲು 2023-24ನೆ ಸಾಲಿನಲ್ಲಿ 73 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ 50 ಆದರ್ಶ ವಿದ್ಯಾಲಯಗಳಲ್ಲಿ ‘ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್’ಗಳನ್ನು ಸ್ಥಾಪಿಸಲು 20 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ 21ನೆ ಶತಮಾನದ ಕೌಶಲ್ಯಗಳಾದ ಸಮಸ್ಯಾ ಪರಿಹಾರ ಕೌಶಲ್ಯ ಅವಿಷ್ಕಾರಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಬಳಸಿ ಹೊಸ ಕಲ್ಪನೆಗಳನ್ನು ವಾಸ್ತವಕ್ಕೆ ತರಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ ಎಂದರು.
ವಿಜ್ಞಾನ, ಎಲೆಕ್ಟ್ರಾನಿಕ್ಸ್, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಆಟೋಮೇಷನ್ ಬಳಸಲು ಸಹಕರಿಸುವಂತಹ ಅವಿಷ್ಕಾರಾತ್ಮಕ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಅತಿ ಮುಖ್ಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಕುತೂಹಲಾತ್ಮಕ ಕಲಿಕೆಯೊಂದಿಗೆ, ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿನ ಪ್ರಯೋಗಾಲಯಗಳು ಅನುಕೂಲಕರವಾಗಲಿವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಯ ಸಮ್ಮೇಳನವನ್ನು ನವೆಂಬರ್ 26ರಂದು ಆಯೋಜಿಸಲು ಸಮಾಜ ಕಲ್ಯಾಣ ಇಲಾಖೆಗೆ 18 ಕೋಟಿ ರೂ.ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸಮ್ಮೇಳನದ ಯೋಜನೆ, ವಿನ್ಯಾಸ ಮತ್ತು ಯಶಸ್ವಿ ರೀತಿಯಲ್ಲಿ ನಡೆಸಲು 2 ಸಮಿತಿಗಳನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಸಂಘಟನಾ ಸಮಿತಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಹಾಗೂ 13 ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ 15 ಹಿರಿಯ ಅಧಿಕಾರಿಗಳುಳ್ಳ ಕಾರ್ಯನಿರ್ವಹಣಾ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯದ 24 ಜಿಲ್ಲೆಯ 106 ತಾಲೂಕುಗಳಲ್ಲಿ 2023-24ನೆ ಸಾಲಿನಲ್ಲಿ ಕೃಷಿ ಹೊಂಡ ಹಾಗೂ ಇತರೆ ಘಟಕಗಳನ್ನು ಒಳಗೊಂಡ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.
ಜಲಾನಯನ ಅಭಿವೃದ್ಧಿ ಕಾರ್ಯಕ್ರಮದ ಮೂಲಕ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ “ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ 38 ಕೋಟಿ ರೂ.ವೆಚ್ಚದಲ್ಲಿ 5 ತಾಲೂಕುಗಳಲ್ಲಿ 5 ಯೋಜನೆಗಳು ಅನುಷ್ಠಾನಕ್ಕೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು(ಕೃಷಿ ಬೆಳೆಗಳಿಗೆ) ಈ ಆರ್ಥಿಕ ವರ್ಷ ಮುಂದುವರೆಸಲು ಅತೀ ಕಡಿಮೆ ಪ್ರೀಮಿಯಂ ದರ ನಮೂದಿಸಿರುವ ಬೆಳೆವಿಮಾ ಸಂಸ್ಥೆಗಳಿಗೆ ಕ್ಲಸ್ಟರ್‍ಗಳನ್ನು ಹಂಚಿಕೆ ಮಾಡಿ ಕೃಷಿ ಆಯುಕ್ತರು ಹೊರಡಿಸಿದ್ದ ಕಾರ್ಯಾದೇಶಗಳಿಗೆ ಘಟನೋತ್ತರ ಮಂಜೂರಾತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 300 ಹೈಟೆಕ್ ಹಾರ್ವೆಸ್ಟರ್ ಹಬ್‍ಗಳನ್ನು ಹಂತ ಹಂತವಾಗಿ ಸ್ಥಾಪಿಸಲು ಹಾಗೂ 2023-24ನೆ ಸಾಲಿನಲ್ಲಿ 100 ಹಾರ್ವೆಸ್ಟರ್ ಹಬ್‍ಗಳನ್ನು ಶೇ.70 ರಷ್ಟು ಸಹಾಯಧನದಲ್ಲಿ ಪ್ರತಿ ಘಟಕಕ್ಕೆ 1 ಕೋಟಿ ರೂ. ಮೀರದಂತೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಇಂದಿರಾನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ತ್ರೀರೋಗ ತಜ್ಞೆ ಡಾ.ಎಸ್.ಡಿ ನಾಗಮಣಿ ವಿರುದ್ಧ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲಾಖಾ ವಿಚಾರಣೆಯಲ್ಲಿ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ 100 ಹಾಸಿಗೆಗಳ ಆಸ್ಪತ್ರೆಯನ್ನು ಈಗಾಗಲೆ ಇನ್ಫೋಸಿಸ್ ಸಂಸ್ಥೆಯ ವತಿಯಿಂದ ಸಿಎಸ್‍ಆರ್ ಯೋಜನೆಯಡಿ ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಈ ಪೈಕಿ ಕೆಲವು ಉಪಕರಣಗಳನ್ನು ಅಳವಡಿಸಲು ಮತ್ತು ಬಾಕಿ ಇರುವ ಸಿವಿಲ್ ಮತ್ತು ಎಲೆಕ್ಟ್ರೀಕ್ ಕಾಮಗಾರಿಗಳನ್ನು ಪೂರ್ಣಗೊಳಿಸಲು 10.34 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಜನನ, ಮರಣ ವಿಳಂಬ ನೋಂದಣಿಗೆ ಸಾರ್ವಜನಿಕರು ಪಾವತಿಸುತ್ತಿರುವ ವಿಳಂಬ ಶುಲ್ಕವನ್ನು ಪರಿಷ್ಕರಿಸಲು ಸಚಿವ ಸಂಪುಟ ಅನುಮೋದಿಸಿದೆ. ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸಿದರೆ ವಿಧಿಸುತ್ತಿದ್ದ ಶುಲ್ಕ 2 ರೂ.ಗಳಿಂದ 100 ರೂ.ಗಳಿಗೆ, 30 ದಿನಗಳ ನಂತರ ಹಾಗೂ ಒಂದು ವರ್ಷದೊಳಗೆ ನೋಂದಾಯಿಸಿದರೆ 5 ರೂ.ಗಳಿಂದ 200 ರೂ.ಗಳಿಗೆ, ಒಂದು ವರ್ಷದ ನಂತರದ ನೋಂದಾಯಿಸಿದರೆ 10 ರೂ.ಗಳಿಂದ 500 ರೂ.ಗಳಿಗೆ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು.
ಪೋಷಣ್ ಅಭಿಯಾನ್ ಯೋಜನೆಯಡಿ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನಿಸಲು ಎತ್ತರ ಮತ್ತು ತೂಕ ತಿಳಿದುಕೊಂಡು ತೂಕ ಮತ್ತು ಎತ್ತರದಲ್ಲಿ ಕುಂಠಿತವಾಗಿರುವ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ನೀಡಲು ಅನುಕೂಲವಾಗುವಂತೆ ಗ್ರೋಥ್ ಮಾನಿಟರಿಂಗ್ ಡಿವೈಸ್‍ಗಳನ್ನು ಖರೀದಿಸಲು 28 ಕೋಟಿ ರೂ.ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
‘ಮುಖ್ಯ ಕಾರ್ಯದರ್ಶಿ ನೇಮಕ: ಸಿಎಂ ವಿವೇಚನೆಗೆ’
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನ.30ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮುಖ್ಯ ಕಾರ್ಯದರ್ಶಿಯನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್, ವಿ.ಮಂಜುಳಾ, ಅಜಯ್ ಸೇಠ್, ಜಾವೇದ್ ಅಖ್ತರ್, ಎಲ್.ಕೆ.ಅತೀಕ್, ತುಷಾರ್ ಗಿರಿನಾಥ್, ಉಮಾ ಮಹಾದೇವನ್, ಶಾಲಿನಿ ರಜನೀಶ್ ಸೇರಿದಂತೆ ಇನ್ನಿತರರ ಹೆಸರು ಚರ್ಚೆಗೆ ಬಂದಿತ್ತು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.







