ಐದು ಆಸ್ಪತ್ರೆಗಳಿಗೆ ಇಸ್ಕಾನ್‍ನಿಂದ ಆಹಾರ ಪೂರೈಸಲು 2.83 ಕೋಟಿ ರೂ. ಅನುಮೋದನೆ ನೀಡಿ ರಾಜ್ಯ ಸರಕಾರ ಆದೇಶ

ಬೆಂಗಳೂರು, ಜ.28: ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ ಸೇರಿ ಐದು ಸಾರ್ವಜನಿಕ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಉಪಾಹಾರ, ಆಹಾರ ಹಾಗೂ ಇನ್ನಿತರೆ ಪದಾರ್ಥಗಳನ್ನು ಇಸ್ಕಾನ್ ಸಂಸ್ಥೆಯಿಂದ ಪಡೆಯಲು 2.83ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ಬುಧವಾರ ಈ ಸಂಬಂಧ ರಾಜ್ಯ ಸರಕಾರವು ಆದೇಶ ಹೊರಡಿಸಿದ್ದು, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ, ಧಾರವಾಡ ಜಿಲ್ಲಾಸ್ಪತ್ರೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಯಲಹಂಕ ಸಾರ್ವಜನಿಕ ಆಸ್ಪತ್ರೆ, ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ, ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪರಿಷ್ಕೃತ ಆಹಾರ ಪದ್ದತಿಯನ್ವಯ ಉಪಾಹಾರ ಹಾಗೂ ಸಿದ್ದಪಡಿಸಿದ ಉತ್ತಮ ದರ್ಜೆಯ ಆಹಾರ ಹಾಗೂ ಇನ್ನಿತರೆ ಪದಾರ್ಥಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.
ನಾಲ್ಕು ತಿಂಗಳ ಅವಧಿಗೆ ಇಸ್ಕಾನ್ ಸಂಸ್ಥೆಯಿಂದ ಉಪಾಹಾರ, ಸಿದ್ಧಪಡಿಸಿದ ಉತ್ತಮ ಉತ್ತಮ ದರ್ಜೆಯ ಆಹಾರ ಹಾಗೂ ಇನ್ನಿತರೆ ಪದಾರ್ಥಗಳನ್ನು ಪೂರೈಕೆ ಮಾಡಲು ಒಟ್ಟು ರೂ. 2,83,47,000 ರೂ.ಗಳ ಅನುದಾನವನ್ನು ಭರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.





