ಸರಕಾರಿ ಜಾಗದಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ : ರಾಜ್ಯ ಸರಕಾರ ಆದೇಶ

ಬೆಂಗಳೂರು, ಅ.18: ರಾಜ್ಯ ವ್ಯಾಪಿ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸರಕಾರಿ ಜಾಗ, ಆವರಣಗಳ ಬಳಕೆ ಹಾಗೂ ಚಟುವಟಿಕೆಗಳನ್ನು ನಡೆಸಲು ಸಂಬಂಧಿಸಿದ ಇಲಾಖೆಗಳಿಂದ ಪೂರ್ವಾನುಮತಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಸೂಕ್ತ ಮಾರ್ಗಸೂಚಿಯನ್ನು ತ್ವರಿತವಾಗಿ ಹೊರಡಿಸುವಂತೆ ಆಯಾ ಇಲಾಖೆಗಳಿಗೆ ಸೂಚಿಸಿದೆ.
ಸರಕಾರದ, ಸರಕಾರಿ ಸಾಮ್ಯದ ನಿಗಮ, ಮಂಡಳಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳು, ತೆರೆದ ಸ್ಥಳಗಳು ಮತ್ತು ಇತರ ಆಸ್ತಿಗಳು ನಾಗರಿಕರ ಸದ್ಬಳಕೆಗೆ ನಿರ್ದಿಷ್ಟಪಡಿಸಲಾಗಿದೆ. ಇವುಗಳನ್ನು ಸಾರ್ವಜನಿಕರು ಬಳಸಲು ಯಾವುದೇ ಅಡಚಣೆಗಳು, ಬೆದರಿಕೆಗಳು ಉದ್ಭವಿಸದಂತೆ ಕ್ರಮವಹಿಸುವುದು ಅತ್ಯಗತ್ಯವಾಗಿದೆ.
ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು, ಸಾರ್ವಜನಿಕರ ಸಾರ್ವತ್ರಿಕ ಅಸಮಾಧಾನ ನಿವಾರಿಸುವುದು ಸಹ ಅವಶ್ಯಕ. ಆದರೆ, ಸಾರ್ವಜನಿಕ ಸ್ಥಳ, ಸರಕಾರದ ಆಸ್ತಿಗಳಲ್ಲಿ ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ, ಬೆಂಬಲಿಗರ ಸಭೆಗಳನ್ನು ನಡೆಸಲು ಸಂಬಂಧಿತ ಇಲಾಖೆಗಳಲ್ಲಿ ಮುಂಚಿತವಾಗಿ ಅನುಮತಿ ಪಡೆಯದೆ, ಅನೇಕ ಸಂದರ್ಭಗಳಲ್ಲಿ ಮಾಹಿತಿ ನೀಡದೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಇಂತಹ ಕ್ರಿಯೆಗಳು ಅಕ್ರಮ ಪ್ರವೇಶ ಎಂದು ಪರಿಗಣಿಸಲ್ಪಡುತ್ತವೆ. ಜತೆಗೆ, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಉಂಟು ಮಾಡುತ್ತವೆ. ಈ ಕಾರಣದಿಂದ ಸರಕಾರದ ಯಾವುದೇ ಆಸ್ತಿ, ಸ್ಥಳದ ಬಳಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಂತ್ರಿಸುವ ಸಲುವಾಗಿ ಯಾವುದೇ ಸಂಘಟನೆ, ಸಂಸ್ಥೆ, ಸಂಘವು ಆಯಾ ಸಾರ್ವಜನಿಕ ಆಸ್ತಿ, ಸ್ಥಳದ ಮಾಲಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಬಳಸಿಕೊಳ್ಳಲು ಅನುಮತಿ ನೀಡುವುದು ಅಗತ್ಯವಾಗಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.
ಯಾವುದೇ ಚಟುವಟಿಕೆಗಳು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿದರೆ ಹಾಗೂ ಸಂಬಂಧಿಸಿದ ಸಂಸ್ಥೆಗಳ ಆವರಣ, ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವುದಾದಲ್ಲಿ ಅಂತಹ ಚಟುವಟಿಕೆಗಳ ಆಯೋಜನೆಗೆ ಅನುಮತಿ ನಿರಾಕರಿಸಲಿವೆ. ಈ ಸಂಬಂಧ ಸೂಕ್ತ ಮಾರ್ಗಸೂಚಿಯನ್ನು ಆಯಾ ಇಲಾಖೆ ಹೊರಡಿಸಲಿದೆ ಎಂದು ಸರಕಾರ ತಿಳಿಸಿದೆ.
ಯಾವೆಲ್ಲ ಸ್ಥಳಗಳಲ್ಲಿ ಅನುಮುತಿ ಕಡ್ಡಾಯ?
*ಸರಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ ಬಳಕೆ ಮಾಡಲು ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅನುಮತಿ ಕಡ್ಡಾಯ
* ಉದ್ಯಾನವನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳ ಬಳಕೆಗೆ ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಮತಿ ಕಡ್ಡಾಯ
* ಸಾರ್ವಜನಿಕ ರಸ್ತೆಗಳು, ಸರಕಾರದ ಇತರೆ ಆಸ್ತಿ, ಸ್ಥಳಗಳನ್ನು ಬಳಕೆ ಮಾಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರಿಂದ ಅನುಮತಿ ಕಡ್ಡಾಯ







