ಸಿನಿಮಾ ಟಿಕೆಟ್ಗಳ ದಾಖಲೆ ನಿರ್ವಹಣೆ ಮಾಡಲು ಮಲ್ಟಿಫ್ಲೆಕ್ಸ್ ಗಳಿಗೆ ರಾಜ್ಯ ಸರಕಾರ ಆದೇಶ

ಸಾಂದರ್ಭಿಕ ಚಿತ್ರ (AI-Grok)
ಬೆಂಗಳೂರು: ರಾಜ್ಯದ ಎಲ್ಲ ಮಲ್ಟಿಫ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ಗಳ ಬೆಲೆಯನ್ನು 200ರೂ.ಗಳಿಗೆ ನಿಗದಿಪಡಿಸಿರುವ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮಲ್ಟಿಫ್ಲೆಕ್ಸ್ ಗಳು ದಾಖಲೆಗಳ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಿರುವ ಸರಕಾರ, ಎಲ್ಲ ಮಲ್ಟಿಪ್ಲೆಕ್ಸ್ ಗಳು ಮಾರಾಟವಾದ ಪ್ರತಿಯೊಂದು ಟಿಕೆಟ್ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಬೇಕು. ಮಾರಾಟದ ದಿನಾಂಕ ಮತ್ತು ಸಮಯ, ಆನ್ಲೈನ್ ಅಥವಾ ಭೌತಿಕ ಕೌಂಟರ್ ಗಳಲ್ಲಿ ಬುಕಿಂಗ್ ಮಾಡಿರುವ ವಿವರ, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ಮಾಡಿರುವ ವಿವರ, ಸಂಗ್ರಹಿಸಿದ ಮೊತ್ತ, ಜಿಎಸ್ಟಿಯನ್ನು ದಾಖಲೆಯು ಒಳಗೊಂಡಿರಬೇಕು ಎಂದು ತಿಳಿಸಿದೆ.
ಎಲ್ಲ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆ ಹಚ್ಚಬಹುದಾದ ರಸೀದಿಗಳನ್ನು ನೀಡಬೇಕು. ಪ್ರತಿದಿನ ಕ್ಯಾಶ್ ರಿಜಿಸ್ಟರ್ ಗಳನ್ನು ಮಲ್ಟಿಪ್ಲೆಕ್ಸ್ ನ ವ್ಯವಸ್ಥಾಪಕರು ಪ್ರತಿ ಸಹಿ ಮಾಡಬೇಕು. ಒಂದು ವೇಳೆ ಹೈಕೋರ್ಟ್ನ ಅಂತಿಮ ತೀರ್ಪು ಸರಕಾರದ ಆದೇಶದ ಪರವಾಗಿ ಬಂದರೆ, ಟಿಕೆಟ್ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಬುಕಿಂಗ್ಗೆ ಬಳಸಿದ್ದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಚಲನಚಿತ್ರ ವೀಕ್ಷಿಸಲು ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪಡೆದ ಟಿಕೆಟ್ಗಳನ್ನು ಕಾಯ್ದಿರಿಸಿಕೊಳ್ಳಬೇಕು. ಹಾಗೆಯೇ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲಕರು ಎಲ್ಲ ರೀತಿಯ ಸಿನಿಮಾ ಟಿಕೆಟ್ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕಾಗಿರುತ್ತದೆ ಎಂದು ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.







